ಕಾರ್ಕಳ, ಜ 29(SM): ಕರಾವಳಿಯ ಹೆಮ್ಮೆಯ ಸುಪುತ್ರ, ಕೊಂಕಣ ರೈಲ್ವೆಯ ರೂವಾರಿ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ರವರ ಅಗಲಿಕೆಯಿಂದ ಅವರ ಅಸಂಖ್ಯಾ ಅಭಿಮಾನಿಗಳಿಗೆ ಅತೀವ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಉಡುಪಿಯ ಧರ್ಮಾಧ್ಯಕ್ಷರು ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನರನ್ನು ಸಂಘಟಿಸುವ ಕಾರ್ಮಿಕ ನಾಯಕನಾಗಿ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನದೇ ವಿಶಿಷ್ಟ ದೇಣಿಗೆಯನ್ನಿತ್ತವರು ಜಾರ್ಜ್ ಫೆರ್ನಾಂಡಿಸ್. ನಿಷ್ಠುರವಾದಿಯಾಗಿ ಅನ್ಯಾಯವನ್ನು ಕಟುಮಾತುಗಳಿಂದ ಖಂಡಿಸಿ, ಸತ್ಯ ಸ್ಥಾಪನೆಗೆ ಹೋರಾಡಿದವರು. ತುರ್ತುಪರಿಸ್ಥಿತಿಯ ಸಮಯದಲ್ಲಿ ಹೋರಾಟ ನಡೆಸಿ ಮುಂಚೂಣಿಗೆ ಬಂದವರು, ವಿಷಮ ಪರಿಸ್ಥಿತಿಯಲ್ಲೂ ಮಾತುಕತೆಯ ಮೂಲಕ ಸಂಧಾನವನ್ನು ನಡೆಸಿದ ಮಹಾನುಭಾವರಾಗಿದ್ದರು.
ಕೊಂಕಣ ಕರಾವಳಿಗೆ ವರದಾನವಾದ ಕೊಂಕಣ ರೈಲ್ವೇಯನ್ನು ಸ್ಥಾಪಿಸಿದ ಸಾಧನೆಯನ್ನು ಯಾರೂ ಮರೆಯಲಾರರು. ಅದೇ ರೀತಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾನ್ಯತೆಗಾಗಿ ಹಾಗೂ ತಾವು ವಿದ್ಯಾಭ್ಯಾಸ ನಡೆಸಿದ ಸಂತ ಆಲೋಶಿಯಸ್ ಕಾಲೇಜಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕೊನೆಗಾಲದವರೆಗೂ ಅವರು ಮಂಗಳೂರಿನ ಈ ಸಂಸ್ಥೆಗಳ ಒಡನಾಟದಲ್ಲಿದ್ದರು ಎಂದರು.
ಜಾರ್ಜ್ ಫೆರ್ನಾಂಡಿಸ್ ಅವರ ಅಗಲಿಕೆಯಿಂದ ಕೊಂಕಣಿ ಕರಾವಳಿ ಮಾತ್ರವಲ್ಲ, ಇಡೀ ದೇಶವೇ ಧೀಮಂತ ನಾಯಕನೊಬ್ಬನನ್ನು ಕಳೆದುಕೊಂಡಿದೆ. ಮಂಗಳೂರಿನ ಈ ಹೆಮ್ಮೆಯ ಸುಪುತ್ರನಿಗಾಗಿ ಇಡೀ ನಾಡೇ ಹೆಮ್ಮೆಪಡುತ್ತಿದೆ. ಅವರು ಮಾಡಿದ ಒಳ್ಳೆಯ ಕಾರ್ಯಗಳು ಅವರ ನೆನಪನ್ನು ಅಮರವಾಗಿಸಲಿ ಎಂದು ತಿಳಿಸಿದ್ದಾರೆ.