ಬೈಂದೂರು, ಜ 30 (MSP): ಕಳೆದ ಆರು ತಿಂಗಳಿಂದ ಇರಾನ್ನಲ್ಲಿ ಬಂಧಿತನಾಗಿದ್ದ ಶಿರೂರಿನ ಅಬ್ದುಲ್ ಮೊಹ್ಮದ್ ಹುಸೇನ್ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದು, ಜ 28 ರ ಸೋಮವಾರ ಶಿರೂರಿನ ಮನೆಗೆ ತಲುಪಿದ್ದಾರೆ. ತಾವು ಅನುಭವಿಸಿದ ನರಕಯಾತನೆಯನ್ನು ನೆನಪಿಸಿಕೊಂಡ ಹುಸೇನ್ , ಅಂತಹ ಸ್ಥಿತಿ ಯಾರಿಗೂ ಬಾರದಿರಲಿ ಎಂದು ಗದ್ಗದಿತರಾಗಿ ನುಡಿದಿದ್ದಾರೆ. ಒಂದು ಲೋಟ ನೀರು ಬೇಕಿದ್ದರೂ ಅತ್ತು ಗೋಗರೆಯಬೇಕಿತ್ತು. ಕೊನೆಗೆ ಸ್ವಲ್ಪ ನೀರನ್ನು ಕುಡಿಯಲೆಂದು ಕೊಡುತ್ತಿದ್ದರು ಎಂದು ಕರಾಳ ದಿನಗಳನ್ನು ನೆನಪಿಸಿಕೊಂಡರು. ತಮ್ಮನ್ನು ಬಂಧಿಸಿಟ್ಟ ಜೈಲಿನ ಸ್ಥಿತಿ ಭೀಕರವಾಗಿತ್ತು.
ಕಾರಾಗೃಹದಲ್ಲಿ ಕಿರಿದಾದ ಕೋಣೆಯಿದ್ದು ಅದಕ್ಕೊಂದು ಚಿಕ್ಕ ಶೌಚಾಲಯ. ಅಲ್ಲಿದ್ದವರೆಲ್ಲಾ ಅದನ್ನೇ ಬಳಸಬೇಕಿತ್ತು. ಹೊರಗಡೆ ಎತ್ತರದ ಅವರಣ ಗೋಡೆ ಮಾತ್ರ ಅದಕ್ಕೆ ಮೇಲ್ಛಾವಣಿ ಇಲ್ಲ. ದಿನದ ಆಹಾರ ಕೇವಲ 2 ತುಂಡು ಬ್ರೆಡ್ ಆಗಿತ್ತು. ಅತ್ತು ಕರೆದು ಗೋಗೆರೆದರೆ ಮಾತ್ರ ಒಂದು ಗ್ಲಾಸ್ ನೀರು ಸಿಗುತ್ತಿತ್ತು ಎಂದು ತಮ್ಮ ಕಷ್ಟದ ದಿನಗಳನ್ನು ನೆನೆಪಿಸಿಕೊಳ್ಳುತ್ತಾರೆ ಹುಸೇನ್.
ಹುಸೇನ್ ಅವರು ಸುಮಾರು 26 ವರ್ಷಗಳಿಂದ ದುಬೈನಲ್ಲಿ ಮೀನುಗಾರಿಕಾ ಬೋಟ್ ಒಂದರಲ್ಲಿ ಕಲಾಸಿಯಾಗಿ ವೃತ್ತಿ ಮಾಡುತ್ತಿದ್ದರು. ಉತ್ತರ ಕರ್ನಾಟಕದಮಂಕಿಯ 18 ಜನ ಹಾಗೂ ಮಹಾರಾಷ್ಟ್ರದ ರತ್ನಗಿರಿಯ 7 ಮಂದಿ ಸೇರಿದಂತೆ 24 ಮಂದಿ ಅವರೊಂದಿಗಿದ್ದರು. ಆದರೆ ಜುಲೈ 27ರಂದು ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಇರಾನ್ ಗಡಿಗೆ ಪ್ರವೇಶಿಸಿದೆ ಎಂದು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ನಮ್ಮ ಬೋಟ್ ಮಾಲಕ ಕೂಡ ನಮ್ಮೊಂದಿಗೆ ಮೀನುಗಾರಿಕೆಗೆ ಬಂದಿದ್ದರು. ಆದರೆ ಇರಾನ್ ಗಡಿಗೆ ಇನ್ನು 9 ಮೈಲಿ ದೂರದಲ್ಲಿದ್ದಾಗಲೇ ಅಲ್ಲಿನ ಪೊಲೀಸರು ನಮ್ಮನ್ನು ಬಂಧಿಸಿದರು. ಇದಕ್ಕೂ ಕೆಲವು ದಿನಗಳ ಹಿಂದೆ ಅಬುಧಾಬಿ ಸರಕಾರ ಇರಾನ್ನ 8 ಮೀನುಗಾರರನ್ನು ಬಂಧಿಸಿತ್ತು. ಅವರನ್ನು ಬಂಧನದಿಂದ ಬಿಡಿಸಿಕೊಳ್ಳವ ಉದ್ದೇಶದಿಂದ ನಮ್ಮನ್ನು ಬಂಧಿಸಲಾಗಿತ್ತು. ನಮ್ಮ ಬಂಧನದಿಂದ ದುಬೈ ಸರಕಾರ ಅಬುಧಾಬಿ ಮೇಲೆ ಒತ್ತಡ ಹೇರಿ ತಮ್ಮ ಮೀನುಗಾರರನ್ನು ಬಿಡುಗಡೆ ಮಾಡಬಹುದು ಎಂಬುದು ಇರಾನ್ನ ಲೆಕ್ಕಚಾರ ಎನ್ನುತ್ತಾರೆ ಹುಸೇನ್.
ನಮ್ಮ ಬಂಧನದ ಬಳಿಕ ದುಬೈ ಮುಸ್ಲಿಂ ಸಂಘಟನೆ, ಎನ್ಆರ್ಎಫ್ ಹಾಗೂ ನಮ್ಮ ಕುಂದಾಪ್ರ ಕನ್ನಡ ಬಳಗದ ಪ್ರಯತ್ನದ ಬಳಿಕ 18 ಜನರು ಬಂಧಮುಕ್ತರಾಗಿದ್ದರು. ಆದರೆ ಹುಸೇನ್ ಮತ್ತು ಉಳಿದವರ ಬಂಧನ ಮುಂದುವರಿದಿತ್ತು. ಕೊನೆಗೂ ಹಲವು ಸಂಘಟನೆಯ ಒತ್ತಡದ ಮೇಲೆ ಹುಸೇನ್ ಬಂಧಮುಕ್ತರಾಗಿ ಹುಟ್ಟೂರಿಗೆ ವಾಪಾಸಾಗಿದ್ದಾರೆ.