ಮಂಗಳೂರು ಅ 26 : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ವಿರುದ್ದ ಅಸಂವಿಧಾನಿಕ ಪದ ಪ್ರಯೋಗ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಅ 26ರ ಗುರುವಾರದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಗೆ ಹಾಜರಾಗದೇ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಅವರು ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿದರು. ಕಳೆದ ಬಾರಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಸಚಿವ ರಮಾನಾಥ ರೈ ವಿರುದ್ಧ ಮಾತನಾಡುತ್ತಾ ಮರಳು ಮಾಫಿಯಾ ವಿಚಾರದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು ಎಲ್ಲರೂ ಒಟ್ಟಾಗಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದರು. ಸದಸ್ಯರಾದ ಮೊಹಮ್ಮದ್, ಮಮತಾ ಗಟ್ಟಿ, ಚಂಧ್ರಪ್ರಕಾಶ್ ತುಂಬೆ, ಧರಣೇಂದ್ರ ಮೊದಲಾದವರು ಸಭೆಗೆ ಹಾಜರಾಗಿಲ್ಲ.