ನವದೆಹಲಿ,ಜ 30 (MSP): ಗುಜರಾತ್ ನ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವವರು. ಇದೀಗ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ.
ಟೀಕಿಸಲೆಂದೇ ರಾಮಾಯಾಣದ ಪಾತ್ರಗಳನ್ನು ಅತೀ ಹೆಚ್ಚು ಬಳಸುವ ಶಾಸಕ ಸುರೇಂದ್ರ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಲಂಕಾಧಿಪತಿ ರಾವಣನಿಗೆ ಹಾಗೂ ಪ್ರಿಯಾಂಕಾರನ್ನು ರಾವಣನ ತಂಗಿ ಶೂರ್ಪನಖಿಗೆ ಹೋಲಿಸಿ ಟೀಕಿಸಿದ್ದಾರೆ. ಇವರ ಹೋಲಿಕೆ ಇಲ್ಲಿಗೆ ನಿಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮ ಎಂದು ಹಾಡಿ ಹೊಗಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಂಕೆಯಲ್ಲಿ ರಾಮ-ರಾವಣರ ಮಹಾಯುದ್ಧ ಆರಂಭಕ್ಕೂ ಮೊದಲು ರಾವಣ ತನ್ನ ತಂಗಿ ಶೂರ್ಪನಖಿಯನ್ನು ಶ್ರೀರಾಮನ ಬಳಿಗೆ ಕಳುಹಿಸುತ್ತಾನೆ. ಇಂದಿನ ಯುದ್ಧದಲ್ಲಿ ರಾವಣನ ಪಾತ್ರವನ್ನು ರಾಹುಲ್ ಗಾಂಧಿ, ರಾಮನ ಪಾತ್ರವನ್ನು ಪ್ರಧಾನಿ ಮೋದಿ ನಿಭಾಯಿಸುತ್ತಿದ್ದಾರೆ. ಶೂರ್ಪನಖಿಯಾಗಿ ಪ್ರಿಯಾಂಕಾರನ್ನು ರಾಹುಲ್ ಗಾಂಧಿ ಯುದ್ಧದ ಕಣಕ್ಕಿಳಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಮಾಯಣದಲ್ಲಿ ಹೇಗೆ ಶ್ರೀರಾಮ ಯುದ್ದವನ್ನು ಗೆಲ್ಲುತ್ತಾನೋ ಅದೇ ರೀತಿ ಈ ಬಾರಿ ಲೋಕಸಭಾ ಚುನವಣೆಯಲ್ಲಿ ಪ್ರಧಾನಿ ಮೋದಿ ಚುನಾವಣೆಯನ್ನು ಗೆದ್ದು ವಿಜಯಿಯಾಗುತ್ತಾರೆ ಎಂದರು.