ಉಡುಪಿ,ಜ 30 (MSP): ಉಡುಪಿಯ ರಥಬೀದಿ ಪರಿಸರದಲ್ಲಿ ಇಂದು ಭಕ್ತಿ ಮತ್ತು ಶ್ರದ್ಧೆಯ ’ಅಕ್ಕಿ ಮುಹೂರ್ತ’ ಸಂಪನ್ನಗೊಂಡಿತು. ಭಾವೀ ಪರ್ಯಾಯ ಸ್ವಾಮೀಜಿ ಅದಮಾರು ಶ್ರೀಗಳ ನೇತೃತ್ವದಲ್ಲಿ ಈ ಪರ್ಯಾಯ ಪೂರ್ವ ವಿಧಿ ನೆರವೇರಿತು. ಇದರೊಂದಿಗೆ ಉಡುಪಿ ಕೃಷ್ಣ ಮಠದ ಭಕ್ತರಿಗೆ ಅದಮಾರು ಶ್ರೀಗಳು ಶುಭ ಸುದ್ದಿಯೊಂದನ್ನೂ ನೀಡಿದರು.. ಮುಂದಿನ ವರ್ಷದಿಂದ ಉಡುಪಿ ಕೃಷ್ಣಮಠಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಶುದ್ಧ ಸಾವಯವ ಅಕ್ಕಿಯಿಂದ ತಯಾರಿಸಿದ ಅನ್ನ ಪ್ರಸಾದವನ್ನು ಬಡಿಸಲಾಗುತ್ತದೆ.
ಉಡುಪಿಯ ಕೃಷ್ಣಮಠದಲ್ಲಿ ಎರಡು ವರ್ಷಕ್ಕೊಮ್ಮೆ ವೈಭವದ ಪರ್ಯಾಯ ನಡೆಯುವುದು ಎಲ್ಲರಿಗೂ ಗೊತ್ತಿರೊ ಸಂಗತಿ. ಕಳೆದ ವರ್ಷ ಪಲಿಮಾರು ಪರ್ಯಾಯ ನಡೆದಿದ್ದು , 2020ರ ಜನವರಿ 18ರಂದು ಉಡುಪಿಯ ಅದಮಾರು ಮಠದ ಪರ್ಯಾಯೋತ್ಸವ ನಡೆಯಲಿದೆ. ಅಂದರೆ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ ಮತ್ತು ನಿತ್ಯ ಹತ್ತಾರು ಸಾವಿರ ಭಕ್ತರಿಗೆ ಅನ್ನದಾಸೋಹದ ಕರ್ತವ್ಯ ಅದಮಾರು ಮಠದ್ದಾಗಿರುತ್ತದೆ.
ಇದಕ್ಕೆ ಪೂರ್ವಭಾವಿಯಾಗಿ ಮುಂದಿನ 2 ವರ್ಷಗಳ ಕಾಲ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಅಕ್ಕಿಯನ್ನು ಸಂಗ್ರಹಿಸುವ "ಅಕ್ಕಿ ಮುಹೂರ್ತ" ಬುಧವಾರ ಅದಮಾರು ಮಠದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಅಕ್ಕಿಯ ಮುಡಿಗಳನ್ನು ರಥಬೀದಿಯಲ್ಲಿ ಮಂಗಳ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ಮಾಡಿ, ಕೃಷ್ಣ ಮಠದಲ್ಲಿ ಪೂಜೆ ಸಲ್ಲಿಸಿ, ಪುನಃ ಅದಮಾರು ಮಠಕ್ಕೆ ತಂದು ವಿದ್ಯುಕ್ತವಾಗಿ ಮುಹೂರ್ತ ನಡೆಸಲಾಯಿತು.ಈ ಸಂದರ್ಭದಲ್ಲಿ ಮುಂದಿನ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ಸಾವಯವ ಅಕ್ಕಿ ಮತ್ತು ತರಕಾರಿಗಳಿಂದ ಅಡುಗೆಯನ್ನು ತಯಾರಿಸಲಾಗುತ್ತದೆ ಎಂದು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.
ಅದಕ್ಕಾಗಿ 18 ದೇಸಿ ತಳಿಯ ಅಕ್ಕಿಯನ್ನು ಅಯ್ಕೆ ಮಾಡಲಾಗಿದೆ. ಈ ಅಕ್ಕಿಯನ್ನು ಸಾವಯವ ರೀತಿಯಲ್ಲಿ ಬೆಳೆಸುವ ರೈತರಿಂದ ನೇರವಾಗಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯವರ್ತಿಗಳಿಲ್ಲದೇ ರೈತರಿಗೆ ಲಾಭವಾಗಲಿದೆ, ಭಕ್ತರಿಗೂ ಆರೋಗ್ಯಕರ ಊಟ ಸಿಗಲಿದೆ, ವಿನಾಶದ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಉಳಿಸಿದಂತಾಗುತ್ತದೆ ಎಂಬುದು ಶ್ರೀಗಳ ಅಭಿಪ್ರಾಯ. ಹಾಗೆ ನೋಡಿದರೆ ಮಠದಲ್ಲಿ ಯಾವುದೇ ಸ್ವಾಮೀಜಿ ಪರ್ಯಾಯ ಕುಳಿತರೂ ಅನ್ನ ದಾಸೋಹ ನಿರಂತರ.ಆದರೆ ಅದಮಾರು ಶ್ರೀಗಳು ಅನ್ನಬ್ರಹ್ಮನನ್ನು ಮೆಚ್ಚಿಸಲು ಸಾವಯವ ದಾಸೋಹದ ಸಂಕಲ್ಪ ಮಾಡಿದ್ದಾರೆ.ಹೀಗಾಗಿ ಅದಮಾರು ಪರ್ಯಾಯ ಸಂದರ್ಭ ಕೃಷ್ಣಮಠಕ್ಕೆ ಭೇಟಿ ನೀಡುವ ಭಕ್ತರಿಗೆ ಸಾವಯವ ಅಕ್ಕಿ ಮತ್ತು ತರಕಾರಿ ಊಟದ ರುಚಿ ಸಿಗಲಿದೆ.