ಮಂಗಳೂರು, ಜ30(SS): ಹೊರ ರಾಜ್ಯದಿಂದ ಬಂದು ನಕಲಿ ಆಧಾರ್ ಕಾರ್ಡ್ ಬಳಸಿ ಮಂಗಳೂರು ನಗರದಲ್ಲಿ ನಕಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮೂವರನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್ ಫೇಸ್ಬುಕ್ ಲೈವ್ ಮಾಡುತ್ತಲೇ ಅಸಲಿ ಮುಖವನ್ನು ಬಯಲು ಮಾಡಿರುವ ಪ್ರಸಂಗ ನಡೆದಿದೆ.
ನಗರದ ಪಿ.ವಿ.ಎಸ್, ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಮೊದಲಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶಿರಡಿ ಸಾಯಿಬಾಬಾ ಹೆಸರಿನಲ್ಲಿ ಹೊರ ರಾಜ್ಯದಿಂದ ಬಂದ ಮೂವರು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಯಿ ಬಾಬಾ ದೇವರ ಹೆಸರು ಹೇಳಿಕೊಂಡು, ತಲೆಗೆ ಕೇಸರಿ ಶಾಲ್ ಸುತ್ತಿಕೊಂಡು ನಾವು ಶಿರಡಿಯಿಂದ ಬಂದಿರುವುದಾಗಿ ಜನರ ಬಳಿ ಹೇಳಿ ಹಣ ವಸೂಲಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಉಡುಗೆ – ತೊಡುಗೆಯನ್ನು ನೋಡಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮೂವರನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್ ವಿಚಾರಿಸಿದಾಗ ಅಸಲಿ ಮುಖ ಬಯಲಾಗಿದೆ.
ಇಷ್ಟೇ ಅಲ್ಲ, ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮೂವರನ್ನು ಹಿಂಬಾಲಿಸಿದ ಸಾಮಾಜಿಕ ಕಾರ್ಯಕರ್ತ ಸೌರಾಜ್ ಅವರು, ಇವರನ್ನು ನಂಬಬೇಡಿ, ಸಾಯಿಬಾಬಾ ದೇವರ ಹೆಸರು ಹೇಳಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಹಣ ನೀಡಬೇಡಿ ಎಂದು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ ಸೌರಾಜ್ ಅವರು, ಹೊರ ರಾಜ್ಯದಿಂದ ಬಂದು ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಈ ಮೂವರಿಗೆ ಸಾಯಿಬಾಬಾ ದೇವರ ಬಗ್ಗೆ ಅರಿವಾಗಲಿ, ಜ್ಞಾನವಾಗಲಿ ಇರಲಿಲ್ಲ. ವಿಚಾರಣೆ ನಡೆಸುತ್ತಿರುವಂತೆಯೇ ಮೂವರಲ್ಲಿ ಓರ್ವ ಪರಾರಿಯಾಗಿದ್ದಾನೆ. ಮೂವರಲ್ಲಿ ಓರ್ವ ಅಂಗವಿಕಲ. ಕೇಸರಿ ಶಾಲ್ ತಲೆಗೆ ಕಟ್ಟಿಕೊಂಡು ಸಾಯಿಬಾಬಾ ದೇವರ ಹೆಸರು ಹೇಳಿ ವಂಚಿಸುವ ಕೆಲಸ ಮಾಡುತ್ತಿದ್ದರು. ಇವರ ಉಡುಗೆ – ತೊಡುಗೆ ಮೇಲೆ ಅನುಮಾನ ಬಂದು ನಾನು ವಿಚಾರಿಸಿದೆ. ಈ ವೇಳೆ ಅಸಲಿ ವಿಷಯವನ್ನು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.