ಉಡುಪಿ,ಜ 31(MSP): ಉಡುಪಿಯ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ಸಂಭವಿಸಿದೆ. ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿ ಆಕೆಯನ್ನು ಹೊರದಬ್ಬಿ ಕಾರನ್ನು ಬಳಿಕ ಬಿಟ್ಟು ಹೋದ ಘಟನೆ ಬುಧವಾರ ಕಿನ್ನಿಮೂಲ್ಕಿ ಬಳಿ ನಡೆದಿದೆ. ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರಿಗೂ ಗೊಂದಲವನ್ನುಂಟು ಮಾಡಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೂದು ಬಣ್ಣದ ರಿಟ್ಜ್ ಕಾರೊಂದು ಬರುತ್ತಿತ್ತು. ಅದರಲ್ಲಿದ್ದ ಯುವತಿ ಬೊಬ್ಬೆ ಹಾಕುತ್ತಿದ್ದಳು. ಕಿನ್ನಿಮೂಲ್ಕಿ-ಬಲಾಯಿಪಾದೆಯ ರಿಕ್ಷಾ ನಿಲ್ದಾಣದ ಸಮೀಪ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಕಾರಿನ ಬಾಗಿಲು ತೆರೆದು ಹೊರಗೆ ಹಾರಲು ಯತ್ನಿಸುತ್ತಿದ್ದಳು.ಇದನ್ನು ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು ಗಮನಿಸಿದ್ದಾರೆ. ತತ್ಕ್ಷಣ ಚಾಲಕ ಕಾರನ್ನು ನಿಧಾನ ಮಾಡಿ ಆಕೆಯನ್ನು ಕಾರಿನಿಂದ ಹೊರಹಾಕಿ ಪರಾರಿಯಾದ ಎನ್ನಲಾಗಿದೆ. ಯುವತಿಯನ್ನು ಹೊರದಬ್ಬಿದ ಚಾಲಕ ಕಾರನ್ನು ಕಿನ್ನಿಮೂಲ್ಕಿ ಫ್ಲೈಓವರ್ ಮೂಲಕ ಉಡುಪಿ ಕಡೆ ಚಲಾಯಿಸಿಕೊಂಡು ಹೋಗಲು ಯತ್ನಿಸಿದ. ಸರ್ವಿಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾದ ಕಾರಣ ಚಾಲಕ ಸಮೀ ಪದ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಎದುರು ನಿಲ್ಲಿಸಿ ಬಸ್ ಹತ್ತಿಕೊಂಡು ಪರಾರಿಯಾದ ಎಂದು ಕಾರನ್ನು ಹಿಂಬಾಲಿಸಿಕೊಂಡು ಹೋದ ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ. ಏತನ್ಮಧ್ಯೆ ಯುವತಿ ಕಾರಿನಿಂದ ಹೊರಗೆ ಹಾರಲು ಯತ್ನಿಸಿಧ್ದೋ? ಅಥವಾ ಆಕೆಯನ್ನು ಹೊರಗೆ ತಳ್ಳಿದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆ ನಡೆದ ತತ್ಕ್ಷಣ ಹಿಂಬದಿ ಯಿಂದ ಚಾಲಕ ಹಾಗೂ ಒಂಟಿ ಮಹಿಳೆ ಇದ್ದ ಪಜೇರೋ ವಾಹನ ಬಂತು. ಕೂಡಲೇ ಆ ಯುವತಿ ಕಾರನ್ನೇರಿದಳು. ಬಳಿಕ ಯೂಟರ್ನ್ ಹೊಡೆದು ಕಾರು ಮಂಗಳೂರಿನತ್ತ ತೆರಳಿತು ಎಂದು ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ.
ಕಾರಿನಲ್ಲಿ ಬ್ಯಾಗ್ ಒಂದು ಪತ್ತೆಯಾಗಿದ್ದು ಇದರಲ್ಲಿ ಮೇಕ್ ಅಪ್ ಸೆಟ್, ನಗದು, ಟಿಕೆಟ್ ಪತ್ತೆಯಾಗಿದೆ. ಕಾರಿನಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಸಿಗರೇಟ್, ಹೆಡ್ ಫೋನ್, ಪಾದರಕ್ಷೆ ಪತ್ತೆಯಾಗಿದೆ. ಉಡುಪಿ ನೋಂದಣಿಯ ಕಾರು ಎನ್ನಲಾಗಿದೆ. ಯಾರೂ ದೂರು ಕೊಡದ ಕಾರಣ ಈ ಪ್ರಕರಣದ ಹಿಂದಿನ ಗುಟ್ಟೇನು ಎಂದು ತಿಳಿದುಬಂದಿಲ್ಲ.
ಪೊಲೀಸರಿಂದ ತನಿಖೆ: ಘಟನ ಸ್ಥಳಕ್ಕೆ ಡಿವೈಎಸ್ಪಿ ಜೈಶಂಕರ್, ಮಲ್ಪೆ ಪೊಲೀಸ್ ನಿರೀಕ್ಷಕ ಮಧು ಆಗಮಿಸಿ ಪರಿಶೀಲನೆ ನಡೆಸಿದರು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಘಟನೆ ಬಗ್ಗೆ ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ ಅದರೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.