ಚಿಕ್ಕಬಳ್ಳಾಪುರ,ಜ 31(MSP): ಕೆಲವು ರೈತ ಮುಖಂಡರುಗಳು ಎತ್ತಿನಹೊಳೆ ಯೋಜನೆ ಬಗ್ಗೆ ಸುಳ್ಳು ಮಾಹಿತಿಗಳನ್ನು ಹಂಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಸಾಯುವ ಮೊದಲು ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಯುವುದನ್ನು ನೋಡಬೇಕು ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ಇಚ್ಚೆ ವ್ಯಕ್ತಪಡಿಸಿದ್ದಾರೆ. ಅವರು ಜ.೩೦ ರ ಬಾಗೇಪಲ್ಲಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಸದನಾಗುವ ಮುನ್ನ ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳ ಜನರು ಫ್ಲೋರೈಡ್ ನೀರು ಕುಡಿದು ವಿವಿಧ ರೀತಿಯ ಕಾಯಿಲೆಗಳಿಂದ ನರಳುತ್ತಿದ್ದರು. ಅನಿಯಮಿತ ಮಳೆಯಿಂದ ಸತತವಾಗಿ ಈ ಪ್ರದೇಶ ಬರ ಪೀಡಿತವಾಗಿತ್ತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಎತ್ತಿನ ಹೊಳೆ ಯೋಜನೆ ಜಾರಿಗೆ ತರಲು ಶ್ರಮಿಸಿದೆ. 420 ಕಿ.ಮೀ. ದೂರದಿಂದ ಬಯಲು ಸೀಮೆ ಜಿಲ್ಲೆಗಳಿಗೆ 24 ಟಿಎಂಸಿ ನೀರು ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಪ್ರದೇಶಕ್ಕೆ ಶುದ್ದು ಕುಡಿಯುವ ನೀರು ನೀಡಬೇಕು ಎನ್ನುವುದು ನನ್ನ ಆಸೆಯಾಗಿದ್ದು, ಎತ್ತಿನಹೊಳೆ ನೀರನ್ನು ಬಯಲುಸೀಮೆ ಜಿಲ್ಲೆಗಳಿಗೆ ಹರಿಯುವುದನ್ನು ನೋಡಿ ಪ್ರಾಣ ಬಿಡಬೇಕು ಎಂಬ ಬಯಕೆ ನನ್ನದಾಗಿದೆ ಎಂದರು.
ಹಲವು ಅಡೆ-ತಡೆ ಅತಂಕಗಳ ನಡುವೆಯೂ ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರವೇ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಆರಂಭಿಕವಾಗಿ ಜೂನ್ ತಿಂಗಳಲ್ಲಿ ಪ್ರಾಯೋಗಿಕವಾಗಿ ನೇತ್ರಾವತಿ ನದಿ ನೀರನ್ನು ಹರಿಸುತ್ತೇವೆ ಎನ್ನುವ ಆಶ್ವಾಸನೆಯನ್ನು ಅವರು ನೀಡಿದರು.