ವಿಟ್ಲ,ಜ 31(MSP): ನಿಧನ ಹೊಂದಿದ ಮಹಿಳೆ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕ ನಿವಾಸಿ ಡಿ.ಕೆ ಅಬ್ಬಾಸ್ ಬಂಧಿತ ಆರೋಪಿ. ಈತನ ದೂರದ ಸಂಬಂಧಿ ಬೀಫಾತುಮ್ಮ ಎಂಬವರು 2007ರಲ್ಲಿ ನಿಧನರಾಗಿದ್ದರು. ಅವರ ಹೆಸರಿನಲ್ಲಿ ಅಳಿಕೆ ಗ್ರಾಮದಲ್ಲಿ ಜಾಗ ಇದೆ. ಆರೋಪಿ ಅಬ್ಬಾಸ್ 2013ರಲ್ಲಿ ಬೀಫಾತುಮ್ಮ ಅವರ ಹೆಸರಿನಲ್ಲಿ ವಕೀಲ ಮೂಲಕ ಜನರಲ್ ಫವರ್ ಆಫ್ ಅಟರ್ನಿ(ಜಿ.ಪಿ.ಎ) ಪಡೆದು ನಕಲಿ ದಾಖಲೆ ಸೃಷ್ಟಿಸಿ ವಿಟ್ಲದ ಖಾಸಗಿ ಬ್ಯಾಂಕ್ನಿಂದ 30 ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಬೀಫಾತುಮ್ಮ ಅವರ ಪುತ್ರಿ ನೆಬಿಸಾ ಎಂಬವರು ಡಿ.ಕೆ ಅಬ್ಬಾಸ್ ಹಾಗೂ ಬ್ಯಾಂಕ್ ಶಾಖಾ ಪ್ರಬಂಧಕ ಸೇರಿದಂತೆ ಇತರರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯ ಅಬ್ಬಾಸ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿತ್ತು. ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ಯಲ್ಲಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.