ಮಂಗಳೂರು,ಜ 31(MSP): ಬಿಜೆಪಿ ಪಕ್ಷದೊಳಗಿನ ಒಪ್ಪಂದ ಸೂತ್ರದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಮ್ಮ ಸ್ಥಾನ ಬಿಟ್ಟು ಕೊಡಬೇಕಾದ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಸಂಬಂಧಿಸಿ ಬುಧವಾರ ಮಹತ್ವದ ಸಮಾಲೋಚನ ಸಭೆ ನಡೆದಿದೆ. ಈ ಹಿಂದೆ ಅಧ್ಯಕ್ಷರ ಆಯ್ಕೆ ಸಂದರ್ಭ ಪಕ್ಷದೊಳಗೆ ನಡೆದಿದೆ ಎನ್ನಲಾದ ಒಡಂಬಡಿಕೆಯಂತೆ ಮೀನಾಕ್ಷಿ ಅವರು ಅಧ್ಯಕ್ಷ ಪದವಿಯನ್ನು ಶಿರ್ತಾಡಿ ಜಿ.ಪಂ. ಕ್ಷೇತ್ರದ ಸದಸ್ಯೆ ಕೆ.ಪಿ. ಸುಜಾತ ಅವರಿಗೆ ಬಿಟ್ಟುಕೊಡಬೇಕಾಗಿದೆ.
2016ರ ಏಪ್ರಿಲ್ 28ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿತ್ತು. ಕ್ರಮವಾಗಿ ಪರಿಶಿಷ್ಟ ಜಾತಿ ಮಹಿಳೆ ಮತ್ತು ಸಾಮಾನ್ಯ ಮಹಿಳೆಗೆ ಎರಡೂ ಸ್ಥಾನಗಳು ಮೀಸಲಾಗಿದ್ದವು. ಬಿಜೆಪಿಯ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷರಾಗಿ ಮತ್ತು ಕಸ್ತೂರಿ ಪಂಜ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ರಾಜೀನಾಮೆ ನೀಡುವಂತೆ ಇಬ್ಬರಿಗೂ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಆದರೆ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ರಾಜೀನಾಮೆಗೆ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಮೀನಾಕ್ಷಿ ಅವರ ಹೊರತಾಗಿ ಶಿರ್ತಾಡಿ ಕ್ಷೇತ್ರದ ಸುಜಾತಾ ಕೆ.ಪಿ. ಒಬ್ಬರೇ ಬಿಜೆಪಿಯಿಂದ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ ಮಹಿಳೆ. ಅಧ್ಯಕ್ಷರ ಆಯ್ಕೆ ಸಂದರ್ಭ ಪಕ್ಷದ ಪ್ರಮುಖರ ಮಾತುಕತೆಯ ಪ್ರಕಾರ ತಲಾ ಎರಡೂವರೆ ವರ್ಷದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಹಂಚಿಕೊಳ್ಳುವ ಬಗ್ಗೆ ಮೊದಲೇ ತೀರ್ಮಾನಿಸಲಾಗಿತ್ತು. ಅದರಂತೆಯೇ ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಮೀನಾಕ್ಷಿ ಶಾಂತಿಗೋಡು ಮತ್ತು ಉಪಾಧ್ಯಕ್ಷ ಸ್ಥಾನದ ಕಸ್ತೂರಿ ಪಂಜ ಅವರು ಕಳೆದ ಅಕ್ಟೋಬರ್ನಲ್ಲಿಯೇ ಅಧಿಕಾರ ಬಿಟ್ಟುಕೊಡಬೇಕಿತ್ತು ಎನ್ನಲಾಗಿದೆ. ಆದರೆ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ರಾಜೀನಾಮೆಗೆ ನಿರಾಕರಿಸುತ್ತಿದ್ದಾರೆ ಆದರೆ ಅಧಿಕಾರ ಬಿಟ್ಟುಕೊಡಬೇಕು ಎನ್ನುವ ಕೂಗು-ಒತ್ತಾಯ ಕೂಡ ಸದಸ್ಯರೊಳಗೆ ಜೋರಾಗಿದೆ.