ಕಾರ್ಕಳ,ಜ 31(MSP): ಮಾಲಿನ್ಯ ರಹಿತ ಪರಿಸರದಿಂದ ಮಾನವನ ಬದುಕಿಗೆ ಅಗತ್ಯವಾದ ಸ್ವಚಂದ ಗಾಳಿ, ನೀರು, ಬೆಳಕು,ಆಹಾರ ಪಡೆಯಲು ಸಾಧ್ಯ. ಪರಿಶುದ್ಧತೆಯ ಮತ್ತೊಂದು ರೂಪವೇ ಪವಿತ್ರವಾಗಿದೆ. ಪರಿಸರದ ಪವಿತ್ರತೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಪರಿಶುದ್ಧತೆ ಇದ್ದಲ್ಲಿ ದೇವನಿರುತ್ತಾನೆ ಎಂದು ಉಡುಪಿಯ ಧರ್ಮಾಧ್ಯಕ್ಷ ಡಾ ಜೆಲಾಲ್ಡ್ ಲೋಬೋ ಹೇಳಿದರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ವಾರ್ಷಿಕೋತ್ಸವದ ಕೊನೆಯ ದಿನದ ಬಲಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಪರಿಸರ ಇರುವುದು ಮಾನವನ ಅನುಭೋಗಕ್ಕಲ್ಲ. ಬದಲಾಗಿ ಅದನ್ನು ಸಂರಕ್ಷಿಸುವುದಕ್ಕೆಂದೇ ಸೃಷ್ಟಿಕರ್ತ ಅದನ್ನು ಸೃಷ್ಠಿಸಿದ್ದಾನೆ. ಪರಸರ ಉಳಿಸಿದಾಗ ಮಾತ್ರ ಅದು ನಮ್ಮ ರಕ್ಷಣೆಗೆ ಬರುತ್ತದೆ. ಪರಿಸರ ಉಳಿಸುವ ಸತ್ಕಾರ್ಯಕ್ಕೆ ನಾವೆಲ್ಲರೂ ಕಟಿಬದ್ಧರಾಗೋಣ ಎಂಬ ಸಂದೇಶವನ್ನು ಇದೇ ಸಂದರ್ಭದಲ್ಲಿ ಅವರು ನೀಡಿದರು. ವೃತ್ತಿಯಲ್ಲಿ ನಿಷ್ಠೆ ತೋರಿಸಬೇಕು. ಹೀಗೆ ಮಾಡಿದ ವ್ಯಕ್ತಿಯ ಬದುಕನ್ನು ಉತ್ತುಂಗಕ್ಕೆ ಕೊಂಡು ಹೋಗುವ ಶಕ್ತಿ ನಿಷ್ಠೆಗೆ ಇದೆ. ವಿಶೇಷ ವ್ಯಕ್ತಿಗಳಲ್ಲಿ ಮಾತ್ರವಲ್ಲ ಸಾಮಾನ್ಯ ವ್ಯಕ್ತಿಗಳಾದ ನಮ್ಮಲ್ಲೂ ಕೂಡಾ ಪ್ರಾಮಾಣಿಕತೆ ಇದ್ದಾಗ ನಾವು ಪವಿತ್ರರಾಗಲು ಸಾಧ್ಯವಿದೆ. ಹೃದಯ ಮತ್ತು ಮಾನಸಿಕತೆಯಲ್ಲೂ ಸ್ವಚ್ಛ ಇರಬೇಕು. ಆಗ ಮಾತ್ರ ಮಾನವೀಯತೆ ಮೌಲ್ಯಗಳು ಪ್ರತಿಯೊಬ್ಬರಲ್ಲೂ ಬೆಳೆಯಲು ಸಾಧ್ಯವೆಂದರು.
ವೃತ್ತಿ ಕ್ಷೇತ್ರದಲ್ಲಿ ವಿಶ್ವಾಸ ಮೂಡಿದಾಗ ಬದುಕಿಗೆ ದಾರಿದೀಪವಾಗುತ್ತದೆ. ಪರಿಸರದಲ್ಲಿ ಸ್ವಂದನೆ, ಸಾಂತ್ವನಾ, ನೆರವಿನ ಹಸ್ತವನ್ನು ಚಾಚಲು ಮುಂದಾಗಬೇಕು. ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಪಾಲು ದಾನಕ್ಕಾಗಿಯೇ ವಿನಿಯೋಗಿಸಿಕೊಂಡಾಗ ದೇವರು ಮಚ್ಚುತ್ತಾನೆ ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಕಾರ್ಕಳ ವಲಯದ ಧರ್ಮಗುರು ಜೋಸ್ವಿ ಫೆರ್ನಾಂಡಿಸ್, ಬಸಿಲಿಕದ ನಿರ್ದೇಶಕ ಹಾಗೂ ಧರ್ಮ ಕೇಂದ್ರದ ಪ್ರಧಾನ ಗುರು ವಂದನೀಯ. ಜಾರ್ಜ್ ಡಿಸೋಜಾ, ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂದಣೀಯ ಜೆನ್ಸಿಲ್ ಆಳ್ವ ಸಹಿತಿ 20 ಧರ್ಮಗರುಗಳು ದಿವ್ಯ ಉಪಸ್ಥಿತರಿದ್ದರು.