ಉಡುಪಿ, ಜ 31(SM): ರಾಮಮಂದಿರ ನಿರ್ಮಾಣ, ಗೋಹತ್ಯಾ ನಿಷೇಧ, ನಿರುದ್ಯೋಗ, ಗಂಗಾಶುದ್ಧೀಕರಣ, ಭ್ರಷ್ಟಾಚಾರ ನಿರ್ಮೂಲನೆ ಈ 5 ಪ್ರಮುಖ ಗುರಿಗಳನ್ನು ಸಾಧಿಸಲು ವಿಶ್ವಹಿಂದು ಪರಿಷತ್ತೆಂಬ ರಥದಲ್ಲಿ ಸಮಸ್ತ ಸಂತರು ಕೃಷ್ಣ ಸಾರಥ್ಯವಹಿಸಿ, ಸಮಸ್ತ ಹಿಂದೂ ಸಮಾಜ ಅರ್ಜುನನಂತೆ ವೀರಾಗ್ರಣಿಗಳಾಗಿ ವಿಜಯ ಸಾಧಿಸುವ ತನಕ ಹೋರಾಟ ಮಾಡಲೇಬೇಕಾಗಿದೆ ಎಂದು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಸಹಸ್ರಾರು ಸಂತರ ಧರ್ಮಸಭೆಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರು ಉದ್ಘೋಶಿಸಿದ್ದಾರೆ.
ಈ ಪಂಚ ಗುರಿಯನ್ನು ಸಾಧಿಸಲು ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆಯನ್ನು ಸಮಾಜ ಹಿಂದೆಂದಿಗಿಂತಲೂ ಹೆಚ್ಚು ತೋರಬೇಕಾಗಿದೆ. ರಾಮಜನ್ಮಭೂಮಿ ವಿವಾದ ಇತ್ಯರ್ಥ ಮತ್ತು ಅತೀ ಶೀಘ್ರ ಮಂದಿರ ನಿರ್ಮಾಣಕ್ಕಾಗಿ ಸಮಸ್ತ ಸಂತರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿ ಪರಿಹಾರಕ್ಕಾಗಿ ಒತ್ತಾಯಿಸುವುದರ ಜೊತೆಗೆ ಸರದಿಯೋಪಾದಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಬೇಕು. ಇದಕ್ಕೆ ಇಡೀ ಸಮಾಜ ಜೊತೆಗೂಡಬೇಕೆಂದು ಆಗ್ರಹಿಸಿದರು.
ಸಹಸ್ರಾರು ಸಂತರು ಕೋಟ್ಯಾಂತರ ಹಿಂದುಗಳ ಈ ಪವಿತ್ರ ಸಮಾಗಮ ಈ 5 ಸವಾಲುಗಳ ಪರಿಹಾರಕ್ಕೆ ಭೀಮಶಕ್ತಿಯನ್ನು ದೇಶಕ್ಕೆ ಕೊಡಲಿ ಎಂದರು.