ಪಡುಬಿದ್ರಿ, ಜ 31(SM): ಪಡುಬಿದ್ರಿಯಲ್ಲಿ ನವಯುಗ್ ಕಂಪನಿಯ ವಿರುದ್ಧ ನಡೆಯುತ್ತಿರುವ ಕರವೇ ಪ್ರತಿಭಟನೆಗೆ ಒಂದು ಹಂತದಲ್ಲಿ ಗೆಲುವು ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತಿಭಟನಾ ಸ್ಥಳಕ್ಕೆ ಕೊನೆಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಮೂರು ದಿನದೊಳಗೆ ತನ್ನ ಹಿರಿಯ ಅಧಿಕಾರಿಗಳೊಡನೆ ಮಾತಾಡಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕವಾಗಿ ಬಸ್ಸು ನಿಲ್ದಾಣ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಮಳೆಗಾಲದ ಮುನ್ನ ಮಾಡುವ ಭರವಸೆಯನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಕೊಟ್ಟಿದ್ದಾರೆ ಎಂದರು.
ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಕಳೆದ 22 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದೆ. ನವಯುಗ ಕಂಪನಿಯ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಜಿಲ್ಲಾಡಳಿತ ಮೂರು ನಾಲ್ಕು ಸಭೆ ನಡೆಸಿದರೂ ಪ್ರತಿಭಟನಾಕಾರರ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ರೊಚ್ಚಿಗೆದ್ದ ಪ್ರತಿಭಟನಾಕಾರರು ಮೈಗೆ ಕಪ್ಪು ಬಣ್ಣ ಹಚ್ಚಿ ಕೈಯಲ್ಲಿ ಭಿಕ್ಷೆ ಬೇಡುವ ರೀತಿಯಲ್ಲಿ ವಿನೂತನ ಶೈಲಿಯ ಪ್ರತಿಭಟನೆ ಕೂಡ ಮಾಡಿದ್ದರು.
ಅದಕ್ಕೂ ಜಿಲ್ಲಾಡಳಿತ ಸ್ಪಂದಿಸಿಲ್ಲವಾದ್ದರಿಂದ ಗುರುವಾರದಂದು ಸಂಘಟನೆ ಉಪಾಧ್ಯಕ್ಷ ಆಸಿಫ್ ತನ್ನ ತಲೆಯ ಕೂದಲು ಕತ್ತರಿಸಿ, ಕೂದಲನ್ನು ಜಿಲ್ಲಾಡಳಿತಕ್ಕೆ ಸಮರ್ಪಣೆ ಎಂದು ಪ್ರತಿಭಟನೆ ಮಾಡಿದರು.
ಪಡುಬಿದ್ರಿ ಪಂಚಾಯತ್ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ವೈ. ಸುಕುಮಾರ್ ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಲೋಕೇಶ್ ಕಂಚಿನಡ್ಕ ಉಪಸ್ಥಿತರಿದ್ದರು.