ಕಾರ್ಕಳ, ಜ 31(SM): ತಾಲೂಕಿನ ಮಾಳ ಚರ್ಚ್ ಬಳಿಯ ಹಾಡಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯೋರ್ವನನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಬಜಗೋಳಿಯ ಶರತ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ.
2018 ಡಿಸೆಂಬರ್ ತಿಂಗಳಿನಲ್ಲಿ ರೆಂಜಾಳದ ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ. ಬಾಲಕಿಗೆ ಮಂಕುಬೂದಿ ಎರಚಿ ವಿವಾಹವಾಗುವ ಭರವಸೆ ನೀಡಿ ಮಾಳದ ಚರ್ಚ್ ಬಳಿಯ ಹಾಡಿಯೊಂದಕ್ಕೆ ಕರೆದೊಯ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಾಳೆ. ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಬಾಲಕಿಯ ಪೋಷಕರು ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ಧ ಕಲಂ 376 ಐಪಿಸಿ ಮತ್ತು ಕಲಂ 4,6,12 ಪೋಕ್ಸೋ ಕಾಯ್ದೆ 2012ರಂತೆ ಕೇಸು ದಾಖಲಾಗಿದೆ.