ಉಡುಪಿ, ಫೆ 01 (MSP): ಉಡುಪಿಯ ಮಣಿಪಾಲದಲ್ಲಿರುವ ಟೈಗರ್ ಸರ್ಕಲ್ ಅಂದ್ರೆ ಯಾರಿಗೆ ಗೊತ್ತಿಲ್ಲ. ಆದರೆ ಮಣಿಪಾಲದ ಜಂಕ್ಷನ್ ನ ಸುಂದರವನ್ನು ಹೆಚ್ಚಿಸಿದ್ದ ಟೈಗರ್ ಸರ್ಕಲ್ ಇನ್ನು ನೆನಪು ಮಾತ್ರ. ಮಣಿಪಾಲ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಇಲ್ಲಿಗೆ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲೆಂದೇ ಆಗಮಿಸುತ್ತಾರೆ. ಟೈಗರ್ ಸರ್ಕಲ್ ಅಂದ್ರೆ ಅದು ಎಲ್ಲರಿಗೂ ಲ್ಯಾಂಡ್ ಮಾರ್ಕ್. ಆದರೆ ಇದೀಗ ಇದನ್ನು ಕೆಡವಲಾಗಿದ್ದು ಬಹಳಷ್ಟು ಮಂದಿಗೆ ಭಾವನಾತ್ಮಕ ವಾಗಿ ನೋವುಂಟು ಮಾಡಿದ್ದಂತೂ ಸತ್ಯ.
ಮಲ್ಪೆ- ಮಣಿಪಾಲ- ಪರ್ಕಳ ರಾಷ್ಟ್ರೀಯ ಹೆದ್ದಾರಿ 169A ಯ ಅಗಲೀಕರಣದ ಕಾರ್ಯ ವೇಗಗತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಟೈಗರ್ ಸರ್ಕಲ್ ತಡೆಯಾಗಿದ್ದರಿಂದ ಸೋಮವಾರ ರಾತ್ರಿ ಕೆಡವಲಾಯ್ತು. ಆ ಜಾಗವನ್ನು ಈಗ ಕಾಂಕ್ರೀಟ್ ತುಂಬಿ ಸಮತಟ್ಟು ಮಾಡಲಾಗಿದೆ. ಅಲ್ಲದೇ ಟ್ರಾಫಿಕ್ ನ್ನು ನಿಯಂತ್ರಣ ಮಾಡಲು ಆ ಜಾಗದಲ್ಲಿ ಹೆಚ್ಚುವರಿ ಪೋಲಿಸ್ ರನ್ನು ನಿಯೋಜಿಸಲಾಗಿದೆ. ಇದರೊಂದಿಗೆ ರಸ್ತೆ ಯಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ.
'ನಾವು ಚಿಕ್ಕವರಿರುವಾಗ ಇದೇ ಪಕ್ಕದಲ್ಲಿ ನಮ್ಮ ಸಣ್ಣ ಅಂಗಡಿ ಇತ್ತು. ಅಲ್ಲಿಗೆ ವಿದ್ಯಾರ್ಥಿಗಳು ಶಾಲಾ ಸಾಮಾಗ್ರಿ ಕೊಳ್ಳಲು ಬರ್ತಿದ್ರು. ಆ ಸಂದರ್ಭ ಸಂಜೆಯ ಹೊತ್ತು ಸುಮಾರು ಸಂಜೆ ಏಳು ಗಂಟೆಯ ಹೊತ್ತಿಗೆ ಒಂದು ಅಥವಾ ಎರಡು ಹುಲಿಗಳು ಘರ್ಜಿಸುತ್ತಾ ಹೋಗುವುದನ್ನು ನಾವೇ ಕಣ್ಣಾರೆ ನೋಡಿದ್ದೇವೆ, ಆಗ ಅದನ್ನು ನೋಡಬೇಕಂತಲೇ ಸುಮಾರು ಕಾದದ್ದು ಇದೆ. ಅಂತು ಅದನ್ನು ನೋಡುವುದೆಂದರೆ ಒಂಥರಾ ಥ್ರಿಲ್. ಯಾರಿಗೂ ಏನೂ ಹಾನಿ ಮಾಡ್ತಿರ್ಲಿಲ್ಲ' . ಆ ಕಾಲದಲ್ಲಿ ಇಡೀ ಮಣಿಪಾಲವೇ ದಟ್ಟ ಕಾಡು, ಅದಕ್ಕೆ ಕುಂಡೇಲು ಕಾಡು ಎನ್ನುತ್ತಿದ್ದರು. ಬಸ್ ಗಳಂತೂ ಗಂಟೆಗೊಂದು ಇರುತ್ತಿದ್ದುದೇ ಹೆಚ್ಚು. ಇದು ಸುಮಾರು 60-70 ವರ್ಷಗಳಷ್ಟು ಹಳೆಯದು. ಸೋಮವಾರ ಆ ಸರ್ಕಲ್ ಕೆಡವುದನ್ನು ನೋಡಿದಾಗ ನಿಜವಾಗಿಯೂ ಕಣ್ಣೀರು ಬಂತು ಎನ್ನುತ್ತಾರೆ 75 ವರ್ಷದ ಮಣಿಪಾಲ್ ಸ್ಟೋರ್ ಮಾಲಕರಾದ ಆತ್ಮರಾಮ್ ನಾಯಕ್. ಆದರೆ ಅಭಿವೃದ್ಧಿಯ ಭರಾಟೆ ಯಿಂದ ಎಲ್ಲವೂ ಕಾಂಕ್ರೀಟ್ ಮಯವಾಗಿದೆ'.
ನಮಗೂ ಆ ಸರ್ಕಲ್ ಗೂ ಭಾವನತ್ಮಕ ಸಂಬಂಧ ಇದೆ. ಈಗ ಕೆಡವಲಾಗಿದೆ, ಆದರೆ ಏನು ಮಾಡುತ್ತರೋ ಗೊತ್ತಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧ ಪಟ್ಟದ್ದು. ಇಲ್ಲಿ ನಾಲ್ಕು ಕಡೆ ಸಂಪರ್ಕ ಕಲ್ಪಿಸಲು ಒಂದು ಸರ್ಕಲ್ ಬೇಕೇ ಬೇಕು. ಇಲ್ಲದಿದ್ದರೆ ಮಣಿಪಾಲ ಇಬ್ಬಾಗವಾದಂತಾಗುತ್ತದೆ. ಒಂದು ವರ್ಷದ ಹಿಂದೆ ಟೈಗರ್ ಸರ್ಕಲ್ ನಲ್ಲಿದ್ದ ಕಾರಂಜಿ ವ್ಯವಸ್ಥೆ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿತ್ತು. ಹಾಗಾಗಿ ಅದನ್ನು ಓಪನ್ ಮಾಡಿದಾಗ ಅದರೊಳಗೆ ಮಲಿನಗೊಡ ನೀರು ಜನರ ಮೇಲೆ ಚೆಲ್ಲಿ ವಾಸನೆ ಬರುವಂತಾಗಿತ್ತು. ಹಾಗಾಗಿ ನೀರಿನ ಬುಗ್ಗೆ ಇರಬಾರದು ಬದಲಿಗೆ ಡೈವರ್ಶನ್ ಮಾಡಬಹುದು, ಎಂದು ಸ್ಥಳೀಯ ರಿಕ್ಷಾ ಚಾಲಕರು ಹೇಳುತ್ತಾರೆ.
ಈಗಾಗಲೇ '#SaveTigerCircle' ಎನ್ನುವ ಪೇಸ್ ಬುಕ್ ಪೇಜ್ ತೆರೆದಿದ್ದು ಸಮಾನ ಮನಸ್ಕರು ಸೇರಿ ಟೈಗರ್ ಸರ್ಕಲ್ ಪುನರ್ ನಿರ್ಮಾಣ ಆಗಬೇಕೆಂದು ಒತ್ತಾಯಿಸಿ ಅಭಿಯಾನ ಪ್ರಾರಂಭಿಸಿದ್ದಾರೆ. ಅಲ್ಲದೆ ಈ ಜಂಕ್ಷನ್ ವಾಹನ ನಿಬಿಡವಾಗಿರುವ ಸ್ಥಳ. ಒಂದು ವೇಳೆ ಇಲ್ಲಿ ಯಾವುದೇ ವೃತ್ತ ಮಾಡದಿದ್ದಲ್ಲಿ ಮಾಧವನಗರಕ್ಕೆ ಹೋಗಲು, ರಸ್ತೆ ದಾಡಲು ಜನರು ಪರದಾಟಬೇಕಾಗುತ್ತದೆ. ಇದೇ ಮಣಿಪಾಲದ ಕೇಂದ್ರ ಬಾಗದಲ್ಲಿ ಬೆಂಗಳೂರು-ಮಂಗಳೂರು ಅಥವಾ ಬೇರೆ ಕಡೆಯಿಂದ ಬಂದ ಟೂರಿಸ್ಟ್ ಬಸ್ಸುಗಳು ಈ ಜಂಕ್ಷನ್ ನಲ್ಲಿ ಯೂ ಟರ್ನ್ ಹೊಡೆದು ಅಲ್ಲೇ ಸ್ವಲ್ಪ ಸಮಯ ನಿಲ್ಲುತ್ತಿತ್ತು. ಖಾಸಗಿ ಬಸ್ಸುಗಳಿದೆ ಉಡುಪಿಯ ಹೃದಯ ಭಾಗದಲ್ಲಿ ಯಾವುದೇ ನಿರ್ದಿಷ್ಟ ಜಾಗವಿಲ್ಲ. ಆದ್ದರಿಂದ ಇದೇ ಪಕ್ಕದಲ್ಲಿ ಬಸ್ ಬೇ ನಿರ್ಮಾಣ ಮಾಡುವ ಯೋಜನೆಯಿದೆ ಎನ್ನುವುದನ್ನು ಬಲ್ಲ ಮೂಲಗಳು ತಿಳಿಸುತ್ತವೆ.
ಅದೇನೆ ಇದ್ದರೂ ಇಲ್ಲಿನ ಸ್ಥಳೀಯಗೆ ಭಾವನಾತ್ಮಕ ವಾಗಿ ಸಂಬಂದ ಹೊಂದಿದ್ದ ಟೈಗರ್ ಸರ್ಕಲ್ ಮತ್ತೆ ಎತ್ತಬೇಕು ಎನ್ನುವುದು ಹಲವಾರು ಮಂದಿಯ ಬೇಡಿಕೆ ಯಾಗಿದೆ. ಮುಂದೆ ರಾ. ಹೆ. ಇಲಾಖೆ ಏನು ಯೋಜನೆ ತರುತ್ತದೆಯೋ ಎಂದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.