ಮಂಗಳೂರು, ಫೆ 01(SM): ಕೇಂದ್ರ ಸರ್ಕಾರ 2019-20ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದು ಇದು ಭಾರತದ ಇತಿಹಾಸದಲ್ಲೇ ಸಾಮಾಜಿಕ ಕಳಕಳಿಯಿಂದ ಕೂಡಿದ ಬಜೆಟ್ ಆಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
2019-20ರ ಸಾಲಿನ ಕೊನೆಯ ಬಜೆಟನ್ನು ರೈತರಿಗೆ, ಮಧ್ಯಮ ವರ್ಗದ ಜನರಿಗೆ ವಿಶೇಷವಾಗಿ ಸಿದ್ಧಪಡಿಸಿದ ಹಾಗಿದೆ ಎಂದಿದ್ದಾರೆ. ಹಾಗೆಯೇ ಕರಾವಳಿ ಭಾಗವನ್ನೂ ವಿಶೇಷವಾಗಿ ಪರಿಗಣಿಸಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಸ್ಥಾಪನೆ, ಮೀನುಗಾರರ ಆರ್ಥಿಕ ಸುಧಾರಣೆಗಾಗಿ ಮತ್ತು ಪಶು ಸಂಗೋಪನಾ ಕ್ಷೇತ್ರಕ್ಕೆ ಶೇಖಡ 2 ರಷ್ಟು ಬಡ್ಡಿ ವಿನಾಯಿತಿ, ಸಾಗರಮಾಲಾ ಯೋಜನೆಯ ಮೂಲಕ ಬಂದರು ಅಭಿವೃದ್ಧಿಯನ್ನು ವಿಶೇಷವಾಗಿ ಪರಿಗಣಿಸಿದ್ದಾರೆ ಎಂದರು.
ಶಾಸಕ ರಾಜೇಶ್ ನಾಯಕ್ ಅಭಿಪ್ರಾಯ:
ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ಅತ್ಯುತ್ತಮ ಬಜೆಟ್ ಇದಾಗಿದೆ. ಈ ಬಜೆಟ್ ನ್ನು ಯಾರೂ ಟೀಕಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ.
ರೈತರ ಸಹಿತ ಎಲ್ಲಾ ವರ್ಗದ ಜನರಿಗೆ ಸಮತೋಲನ ಕಾಯ್ದುಕೊಂಡು ಉತ್ತಮ ರೀತಿಯ ಬಜೆಟ್ ಮಂಡಿಸಿದ್ದಾರೆ ಇದನ್ನು ಜನ ಮೆಚ್ಚುತ್ತಾರೆ ಎಂದು ಹೇಳಿದರು.