ಉಡುಪಿ, ಫೆ02(SS): ಇಲ್ಲಿನ ಮಲ್ಪೆ ಮೂಲದ ಭೂಗತ ಪಾತಕಿ ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಜಧಾನಿ ಡಕಾರ್ನಲ್ಲಿ ಅಂದರ ಆಗಿದ್ದು, ಕಾರ್ಕಳ, ಉಡುಪಿ, ಬ್ರಹ್ಮಾವರ ಠಾಣೆ ಸಹಿತ ಇತನ ಮೇಲೆ ಒಟ್ಟು 10 ಕೇಸ್ಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಠಾಣೆಯಲ್ಲಿ ಇತನ ಮೇಲೆ ದಾಖಲಾಗಿರುವ ಈ 10 ಪ್ರಕರಣಗಳು ಹಫ್ತಾ ವಸೂಲಿ, ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿವೆ. 2006 ರವಿ ಪೂಜಾರಿ ಮೇಲೆ ಮೊದಲ ಪ್ರಕರಣ ಪಡುಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದು, ಬಳಿಕ ಕಾರ್ಕಳ, ಉಡುಪಿ, ಬ್ರಹ್ಮಾವರ ಠಾಣೆ ಸಹಿತ ಒಟ್ಟು 10 ಕೇಸ್ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ರವಿ ಪೂಜಾರಿ ಸುಮಾರು 1990ರ ಬಳಿಕ ಭೂಗತ ಪಾತಕಿಯಾಗಿ ಗುರುತಿಸಿಕೊಂಡಿದ್ದು, ಊರಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು. ರವಿ ಪೂಜಾರಿ ತಮ್ಮ ಮಧು ಕೂಡಾ ಇತ್ತೀಚೆಗೆ ಮೃತರಾಗಿದ್ದಾರೆ. ಮಲ್ಪೆ ವಡಭಾಂಡೇಶ್ವರ ನೆರ್ಗಿ ಸರಸ್ವತಿ ಭಜನಾ ಮಂದಿರ ಬಳಿ ರವಿ ಪೂಜಾರಿ ಮೂಲ ಮನೆ ಇದೆ. ಪದೇ ಪದೇ ರವಿ ಪೂಜಾರಿ ವಿಚಾರಣೆಗೆ ಪೊಲೀಸರು ಬರುತ್ತಿದ್ದು, ಈ ಕಿರಿಕಿರಿ ತಪ್ಪಿಸಿಕೊಳ್ಳಲು ಸಲುವಾಗಿ 15 ವರ್ಷದ ಹಿಂದೆಯೇ ಮನೆ ಮಾರಾಟ ಮಾಡಿ ಊರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರವಿ ಪೂಜಾರಿ ತಂದೆ 5 ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಸದ್ಯ ಮಗಳೊಂದಿಗೆ ದೆಹಲಿಯಲ್ಲಿ ವಾಸವಿದ್ದಾರೆ. ಸುಶೀಲ ಪೂಜಾರಿ (ತಾಯಿ) ಸಹೋದರಿಯ ಸಂಬಂಧಿಗಳು ಮಾತ್ರವೇ ಉಡುಪಿ ಆಸುಪಾಸಿನಲ್ಲಿದ್ದು, ಯಾವ ಸಂಪರ್ಕವೂ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.