ಬೆಂಗಳೂರು,ಫೆ02(SS): ಸೆನೆಗಲ್ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿ ಆಂಟನಿ ಫೆರ್ನಾಂಡಿಸ್ ಎಂಬ ಹೆಸರಿನಲ್ಲಿ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ರೆಸ್ಟೊರೆಂಟ್ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ರವಿ ಪೂಜಾರಿ ಸೆನೆಗಲ್ನಲ್ಲಿ ಇದ್ದುಕೊಂಡು ಭಾರತದ ಉದ್ಯಮಿಗೆ ಸುಲಿಗೆಗೆ ಬೆದರಿಕೆ ಕರೆಗಳನ್ನು ಮಾಡುತ್ತಲೇ ಇದ್ದ. ದಾಕಾರ್ ಸಮೀಪದ ಸೆಲೂನ್ ಒಂದರಲ್ಲಿ ರವಿ ಪೂಜಾರಿ ಕುಳಿತಿದ್ದಾಗ ಬಂಧಿಸಲಾಗಿದೆ. 3 ವಾಹನಗಳಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಪೊಲೀಸರು ಸೆಲೂನ್ ಮೇಲೆ ಹಠಾತ್ ದಾಳಿ ನಡೆಸಿ ಬಂಧಿಸಿದ್ದಾರೆ.
ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಬುರ್ಕಿನಾ ಫಾಸೊ, ಗ್ವೈನಿಯಾ, ಐವರಿ ಕೋಸ್ಟ್ ಮತ್ತು ಸೆನೆಗಲ್ ಗಳಲ್ಲೆಲ್ಲಾ ರವಿ ಪೂಜಾರಿ ಪ್ರಯಾಣಿಸುತ್ತಿದ್ದ. ಅಲ್ಲಿ ರೆಸ್ಟೊರೆಂಟ್ ಒಂದನ್ನು ನಡೆಸುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಆ ದೇಶಗಳಲ್ಲಿ ನೆಲೆಸಲು ರವಿ ಪೂಜಾರಿ ಆಂಟೊನಿ ಫರ್ನಾಂಡಿಸ್ ಎಂಬ ಹೆಸರಿನಲ್ಲಿ ಅಗತ್ಯ ದಾಖಲೆಗಳನ್ನು ಕೂಡ ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ರವಿ ಪೂಜಾರಿಯನ್ನು ಬಂಧಿಸುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆದೇಶ ನೀಡಿದ ನಂತರ ಬಂಧನಕ್ಕೆ ಪೊಲೀಸರ ಕಾರ್ಯ ತೀವ್ರಗೊಂಡಿತು. ಸುಮಾರು 2 ದಶಕಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ರವಿ ಪೂಜಾರಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.