ಕುಂದಾಪುರ, ಫೆ02(SS): ಇಲ್ಲಿನ ಕುಂಭಾಶಿಯ ಹಳೆಯ ಶೆಡ್ಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅಸ್ಥಿಪಂಜರವೊಂದು ಪತ್ತೆಯಾಗಿದೆ.
ಮೇಲ್ನೋಟಕ್ಕೆ 4-5 ವರ್ಷಗಳ ಹಿಂದೆ ಸತ್ತಿರಬಹುದಾಗಿರುವ ಮಹಿಳೆಯ ಅಸ್ಥಿಪಂಜರ ಎಂದು ಅಂದಾಜಿಸಲಾಗಿದೆ. ಸೀರೆ, ರವಿಕೆ ಮೊದಲಾದ ಮಹಿಳೆಯ ಉಡುಪುಗಳೂ ಕೂಡ ಅಸ್ಥಿಪಂಜರ ಸಹಿತ ಪತ್ತೆಯಾಗಿದೆವೆ. ಆದರೆ ಬಣ್ಣ ಮಾಸಿ ಹೋಗಿದ್ದರಿಂದ ಯಾವ ಮಹಿಳೆಯದ್ದು ಎನ್ನುವುದು ಪತ್ತೆಯಾಗಿಲ್ಲ.
ಕಳೆದ 4 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಾಲತಿ ಶೆಟ್ಟಿಯ ಅಸ್ಥಿಪಂಜರ ಇದಾಗಿರಬಹುದು ಎಂಬ ಅನುಮಾನಗಳು ಪೊಲೀಸರ ತಲೆಯೊಳಗೆ ಸುಳಿದಾಡುತ್ತಿದೆ. ಹೀಗಾಗಿ ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪಾಳು ಬಿದ್ದಿದ್ದ ಶೆಡ್ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಅಸ್ಥಿಪಂಜರ ಕಂಡು ಬಂದಿದ್ದು, ತಕ್ಷಣ ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಮೂಳೆಗಳ ಭಾಗಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ.