ಕುಮಟಾ, ಫೆ02(SS): ಡಿ.15, 2018ರಂದು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಒಟ್ಟು ಏಳು ಮಂದಿ ಮೀನುಗಾರರು ನಾಪತ್ತೆಯಾಗಿದ್ದು ಇದುವರೆಗೆ ಪತ್ತೆಯಾಗಿಲ್ಲ. ಪರಿಣಾಮ, ಮೀನುಗಾರರ ಕುಟುಂಬದವರ ಅಳಲು, ನೋವು ಹೆಚ್ಚಾಗುತ್ತಲೇ ಇದೆ.
ಕಾಣೆಯಾದವರಲ್ಲಿ 5 ಮಂದಿ ಮೀನುಗಾರರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದರೆ, ಇಬ್ಬರು ಉಡುಪಿ ಜಿಲ್ಲೆಗೆ ಸೇರಿದವರು. ಲಕ್ಷ್ಮಣ, ರವಿ, ಹರೀಶ್ ಮೊಗವೀರ್, ರಮೇಶ್ ಮೊಗವೀರ್, ಸತೀಶ್ ಹರಿಕಂತ್ರ, ಉಡುಪಿ ಜಿಲ್ಲೆಯ ಚಂದ್ರಶೇಖರ ಕೋಟ್ಯಾನ್, ದಾಮೋದರ್ ಕಾಣೆಯಾದವರು.
ಡಿ.15, 2018ರಂದು ಮೀನುಗಾರಿಕೆಗೆ ತೆರಳಿದ ಎರಡು ದಿನಗಳ ಬಳಿಕ ಮಹಾರಾಷ್ಟ್ರದ ಸಿಂದೂದುರ್ಗ ಕರಾವಳಿಯಲ್ಲಿದ್ದ ಬೋಟ್ ತನ್ನ ಸಂಪರ್ಕವನ್ನು ಕಳೆದುಕೊಂಡಿತ್ತು. ಆದ್ರೆ 45ಕ್ಕೂ ಹೆಚ್ಚು ದಿನಗಳು ಕಳೆದಿದ್ದರೂ ಆ ಬೋಟ್ ಎಲ್ಲಿದೆ ಎಂದಾಗಲಿ, ಅದರಲ್ಲಿನ ಮೀನುಗಾರರು ಎಲ್ಲಿದ್ದಾರೆಂದಾಗಲಿ ಸುಳಿವು ಲಭ್ಯವಾಗಿಲ್ಲ.
ಆದರೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರು ಕಾಣೆಯಾದವರು ಮರಳಿ ಬರುತ್ತಾರೆ ಎಂಬ ನಂಬಿಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಹಲವು ವದಂತಿಗಳು ಬರುತ್ತಿದೆ. ಕಾಣೆಯಾದ ಬೋಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಸತ್ಯಕ್ಕೆ ಪೂರಕವಾಗಿರುವ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಈ ನಡುವೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರ ಪೈಕಿ ಇಬ್ಬರ ಮೊಬೈಲ್ ರಿಂಗ್ ಆಗಿದೆ ಎಂಬ ಸುದ್ದಿಕೇಳಿ ಬಂದಿತ್ತು.
ಕಣ್ಮರೆಯಾಗಿರುವ ಲಕ್ಷಣ್ ಅವರ ಮೊಬೈಲ್ಗೆ ಕರೆ ಮಾಡಿದ ಸಂದರ್ಭದಲ್ಲಿ 2 ರಿಂಗ್ ಆಗಿತ್ತು ಎನ್ನುತ್ತಾರೆ ಅವರ ಸಹೋದರ ಪಾಂಡು ಮೊಗೇರ. ಮಾತ್ರವಲ್ಲ, 2 ಬಾರಿ ಮೊಬೈಲ್ ರಿಂಗ್ ಆಗಿತ್ತು ಎಂದು ದೂರಿನಲ್ಲಿ ಕೂಡ ತಿಳಿಸಿದ್ದಾರೆ. ಆದರೆ ರಿಂಗ್ ಆದ ಕೆಲವೇ ಕ್ಷಣದಲ್ಲಿ 2 ಮೊಬೈಲ್ಗಳು ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಪರಿಶೀಲಿಸಿದ್ದು, ನಾಪತ್ತೆಯಾದ ಮೊಬೈಲ್ ಸಂಖ್ಯೆಗಳಿಗೆ ಕರೆಗಳು ಹೋಗಿಲ್ಲ. ನಾಪತ್ತೆಯಾದ ಮೀನುಗಾರರ ಮೊಬೈಲ್ ಇದುವರೆಗೆ ಸ್ವಿಚ್ ಆನ್ ಆಗಿಲ್ಲ. ಮೊಬೈಲ್ ಟವರ್ನಲ್ಲಿ ಸಿಗ್ನಲ್ ಜಂಪ್ ಆಗಿ ಇನ್ನೊಂದು ಮೊಬೈಲ್ ಸಂಖ್ಯೆಗೆ ಕರೆಗಳು ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ತಾಂತ್ರಿಕ ಸಾಕ್ಷ್ಯಗಳು ನಮ್ಮಲಿಲ್ಲ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ.