ಮಂಗಳೂರು,ಫೆ 03 (MSP): ಮರವೂರಿನಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದಿಂದ ಕಟೀಲು ದೇವಸ್ಥಾನಕ್ಕೆ ಕೈಗೊಂಡ 6 ನೇ ವರ್ಷದ ಪಾದಯಾತ್ರೆ ಅಭಿಯಾನ ‘ಅಮ್ಮನೆಡೆಗೆ ನಮ್ಮ ನಡೆ’ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಭಾನುವಾರ ಸಂಪನ್ನಗೊಂಡಿತು.
ಲೋಕಕಲ್ಯಾಣಾರ್ಥ ಕೈಗೊಂಡಿರುವ ‘ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆ ಅಭಿಯಾನಕ್ಕೆ ಭಾನುವಾರ ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಬೆಳಗಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಮರವೂರು ಸಂದೀಪ್ ಶೆಟ್ಟಿಯವರು ಲೋಕಕಲ್ಯಾಣಾರ್ಥ ಆರು ವರ್ಷಗಳಿಂದ ನಡೆಸುವ ಈ ಕಾರ್ಯದ ಬಗ್ಗೆ ಶ್ಲಾಘನೀಯ ಎಂದರು. ಕಟೀಲು ದುರ್ಗಾಪರಮೇಶ್ವರಿಯ ಚಿತ್ರವನ್ನೊಳಗೊಂಡ ಪುಷ್ಪಾಲಂಕೃತ ದೇವರ ರಥ, ಬ್ರಹ್ಮ, ವಿಷ್ಣು , ಮಹೇಶ್ವರ ಯಕ್ಷಗಾನ ವೇಷಧಿಧಾರಿಧಿಗಳು, ಭಜನ ಮಂಡಳಿ, ಸಂಘ -ಸಂಸ್ಥೆಗಳ ಭಜನ ಸಂಕೀರ್ತನೆಯೊಂದಿಗೆ ಕಟೀಲಿನೆಡೆಗೆ ಹೆಜ್ಜೆ ಹಾಕಿದರು.
ಈ ಸಂದರ್ಭ ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ದಪೀಠ ಧರ್ಮದರ್ಶಿ ಪ್ರವೀಣ್ ರಾಜ್ ಮಚ್ಚೇಂದ್ರ ನಾಥ ಬಾಬಾ, ಶ್ರೀ ಕ್ಷೇತ್ರ ಕಟೀಲು ದೇವಾಲಯದ ಪ್ರಧಾನ ಅರ್ಚಕ ಕೆ.ವಾಸುದೇವ ಅಸ್ರಣ್ಣ, ಲಕ್ಷ್ಮೀ ನಾರಾಯಣ ಅಸ್ರಣ್ಣ, ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಉಮಾನಾಥ್ ಕೋಟ್ಯಾನ್, ಹರೀಶ್ ಪೂಂಜಾ, ಪಾದಯಾತ್ರೆ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಹಿಂದೂ ಮುಖಂಡರಾದ ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಮತ್ತಿತರರು ಉಪಸ್ಥಿತರಿದ್ದರು.
30 ಸಾವಿರಕ್ಕೂ ಹೆಚ್ಚು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ಕಟೀಲು ದೇಗುಲದ ಬೀದಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಟೀಲು ದೇಗುಲದ ಆಡಳಿತ ಮೊಕ್ತೇಸರ ಡಾ| ಕೆ. ರವೀಂದ್ರನಾಥ ಪೂಂಜ, ಆರ್ಚಕ ಕೆ. ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಆನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಸಾಯಿನಾಥ ಶೆಟ್ಟಿ, ಅನಿಲ್ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕಟೀಲಿನಲ್ಲಿ ಭಕ್ತರ ಸುವ್ಯವಸ್ಥೆಗೆ ಸ್ವಯಂ ಸೇವಕರು ಹಾಗೂ ಕಟೀಲು ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು.