ಕಡಬ ಅ27: ವಾಟ್ಸಾಪ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೋಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅ. 28ರಂದು ಕಡಬ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ.ಕಡಬದಲ್ಲಿ ನಿನ್ನೆ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ವಾಟ್ಸಾಪ್ ಪ್ರಕರಣದಲ್ಲಿ ಆರೋಪಿತ ಯುವಕನನ್ನು ಸಂಘಟನೆಯ ಪ್ರಮುಖರೇ ಪೋಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕನನ್ನು ಸಿಲುಕಿಸಲಾಗಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಅನಗತ್ಯವಾಗಿ ನಾಲ್ವರನ್ನು ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಶನಿವಾರದಂದು ಕಡಬ ಹಾಗೂ ಸುಬ್ರಹ್ಮಣ್ಯದಲ್ಲೂ ಏಕ ಕಾಲದಲ್ಲಿ ಬಂದ್ ಹಾಗೂ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಸಂಘಟನೆ ಪ್ರಮುಖರು ತಿಳಿಸಿದ್ದಾರೆ.