ಮಂಗಳೂರು, ಫೆ 4(MSP): ಕೆಲಸ ಕೊಡಿಸುವ ಹಾಗೂ ಹಣದ ಸಹಾಯ ಮಾಡುವ ಆಮಿಷವೊಡ್ಡಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರು ಕ್ರೈಸ್ತ ಪಾದ್ರಿಗಳ ವಿರುದ್ದ ಮೈಸೂರಿನ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೈಸೂರಿನ ಎನ್.ಆರ್ ಮೊಹಲ್ಲಾದ ಬಾಲಕಿ ಮೇಲೆ ಮೈಸೂರಿನ ಒಬ್ಬರು ಹಾಗೂ ಮಂಗಳೂರಿನ ಇಬ್ಬರು ಪಾದ್ರಿಗಳ ವಿರುದ್ದ ಅತ್ಯಾಚಾರ, ಅಪಹರಣ, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಪಾದ್ರಿಯು ಎನ್.ಆರ್ ಮೊಹಲ್ಲಾದ 16 ವರ್ಷದ ಬಾಲಕಿಗೆ ನರ್ಸಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದು, ಆಕೆಯ ತಾಯಿಗೆ ಮನೆ ಕಟ್ಟಲು ಒಂದು ಲಕ್ಷ ರೂ. ನೆರವು ನೀಡುವುದಾಗಿ ಆಮಿಷವೊಡ್ಡಿ ಪಾದ್ರಿ ಸೆಬಾಸ್ಟಿಯನ್ ಮಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದ್ರೆ ಮಂಗಳೂರಿನಲ್ಲಿ ಆಕೆಗೆ ನರ್ಸಿಂಗ್ ಕೆಲಸ ನೀಡದೆ ಮನೆಕೆಲಸಕ್ಕೆ ಇರಿಸಿಕೊಂಡಿದ್ದರು. ಇದೇ ಸಂದರ್ಭ ಪಾದ್ರಿ ಸೆಬಾಸ್ಟಿಯನ್ ಹಾಗೂ ಮಂಗಳೂರು ಬಲ್ಮಠದ ನಿವಾಸಿಗಳಾಗಿದ್ದ ಜೋಶುವಾ ಅಮನ್ ಹಾಗೂ ಬೆನ್ನೆಟ್ ಅಮನ್ ಎಂಬಿಬ್ಬರು ಪಾದ್ರಿಗಳು ಸೇರಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಈ ಬಗ್ಗೆ ಬಾಲಕಿಯ ಪೋಷಕರು ಸ್ವಯಂ ಸೇವಾ ಸಂಸ್ಥೆಯ ಮೂಲಕ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾರೆ. ಹೈಕೋರ್ಟ್ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಘಟನೆ ಬಗ್ಗೆ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.