ಉಡುಪಿ, ಫೆ04(SS): 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಉಡುಪಿಯ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಕುಂಜಿಬೆಟ್ಟುವಿನ ಬಬ್ಬುಸ್ವಾಮಿಗೆ ಹರಕೆ ಹೇಳಿಕೊಂಡಿದ್ದು, ಅದರಂತೆ 48 ಗಂಟೆಗಳ ಕಾಲ ಸೇವೆಯನ್ನು ದೈವಗಳಿಗೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಗೆದ್ದರೆ ದೈವಗಳಿಗೆ ನೇಮೋತ್ಸವದ ಸೇವೆ ನೀಡುತ್ತೇವೆ ಎಂದು ಹರಕೆ ಹೇಳಿಕೊಂಡಿದ್ದರು. ಬಿಜೆಪಿಗೆ ಐದಕ್ಕೆ ಐದು ಸೀಟು ಗೆಲ್ಲಿಸಿಕೊಟ್ಟರೆ ಧರ್ಮ ನೇಮೋತ್ಸವ ಕೊಡುವುದಾಗಿ ಮಟ್ಟಾರು ರತ್ನಾಕರ ಹೆಗ್ಡೆ ದೇವರಲ್ಲಿ ನಿವೇದನೆ ಮಾಡಿಕೊಂಡಿದ್ದರು. ಅದರಂತೆ ಉಡುಪಿಯಲ್ಲಿ ಬಿಜೆಪಿ ಗೆದ್ದಿದಕ್ಕೆ 48 ಗಂಟೆಗಳ ಕಾಲ ಸೇವೆಯನ್ನು ದೈವಗಳಿಗೆ ಭಕ್ತಿಯಿಂದ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಪಕ್ಕದಲ್ಲೇ ಇರುವ ಗುಡಿಯಲ್ಲಿ ಎರಡು ದಿನಗಳ ಕಾಲ ನರ್ತನ ಸೇವೆ ನಡೆದಿದೆ.
ತುಳುನಾಡಿನ ಕಾರಣಿಕ ದೈವ ಶಕ್ತಿಗಳಾದ ಬಬ್ಬುಸ್ವಾಮಿ, ಧೂಮಾವತಿ ಬಂಟ, ಜೋಡಿ ಗುಳಿಗ, ನೀಚದೈವ- ಕೊರಗಜ್ಜ ದೈವಗಳಿಗೆ ಕೋಲ ಸೇವೆ ನೀಡಲಾಗಿದೆ.
ಈ ವೇಳೆ ಶಾಸಕರಾದ ಸುನೀಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಧರ್ಮ ನೇಮೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕೂಡ ನೇಮೋತ್ಸವದಲ್ಲಿ ಹಾಜರಿದ್ದರು.