ಉಡುಪಿ, ಫೆ 04(SM): ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹತ್ಯೆ ಕೃತ್ಯವನ್ನು ಮರು ಸೃಷ್ಟಿಸಿ ಸಂಭ್ರಮಿಸಿದ ಹಿಂದೂ ಮಹಾಸಭಾದ ಕಾರ್ಯಕರ್ತರ ಹೇಯ ಕೃತ್ಯವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಪಂಚಾಯತ್ ರಾಜ್ ಸಂಘಟನೆ ಜಂಟಿಯಾಗಿ ಪ್ರತಿಭಟನೆಯನ್ನು ನಡೆಸಿತು.
ದೇಶದಲ್ಲಿ ಸಂಘ ಪರಿವಾರಕ್ಕೆ ಸಂಬಂಧಪಟ್ಟ ಸಂಘಟನೆಗಳು ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಗುಂಡು ಹೊಡೆಯುವುದನ್ನು ಪ್ರತ್ಯಾಕ್ಷಿಕೆ ಮೂಲಕ ಮಾಡಿ ಗೋಡ್ಸೆ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದು ಈ ದೇಶದ ರಾಷ್ಟ್ರ ಪ್ರೇಮಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನಗೊಳಿಸಲಾಗಿದೆ.
ಗಾಂಧೀಜಿಯವರು ಈ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂಥವರಿಗೆ ಅಪಮಾನ ಮಾಡಿರುವುದರಿಂದ ದೇಶವೇ ತಲೆತಗ್ಗಿಸುವಂತಾಗಿದೆ. ರಾಷ್ಟ್ರವೇ ಗಾಂಧೀಜಿಯವರ ಪುಣ್ಯದಿನವನ್ನು ಅಹಿಂಸಾ ದಿನವಾಗಿ ಆಚರಣೆ ಮಾಡುತ್ತಿರುವಾಗ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಗೋಡ್ಸೆ ಅನುಯಾಯಿಗಳನ್ನು ದೇಶದ ಜನತೆ ಖಂಡಿಸಬೇಕಾಗಿದೆ. ಸಹ ಸಂಘಟನೆಗಳು ಮಹಾತ್ಮಾ ಗಾಂಧಿಯವರಿಗೆ ಅಪಮಾನ ಮಾಡಿದರೂ ಬಿಜೆಪಿ ಮೌನವಾಗಿರುವುದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಮ್.ಎ. ಗಫೂರ್, ಕಾರ್ಯದರ್ಶಿ ವೆರೋನಿಕಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ ಹಾಗೂ ಉದ್ಯಾವರ ನಾಗೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.