ಮಂಗಳೂರು, ಅ 27: ಬೆಳ್ತಂಗಡಿಯ ಉಜಿರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ.
ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಅವರು ಆಗಮಿಸಿದ್ದು ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ಅವರ ಭದ್ರತೆಯ ದೃಷ್ಟಿಯಿಂದ ಜಿಲ್ಲೆಯ ಬೇರೆ ಬೇರೆ ಸ್ಥಳಗಳು ಸೇರಿದಂತೆ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಎಸ್.ಪಿ.ಜಿ ಪಡೆಯ ಐಜಿ ಶ್ರೇಣಿಯ ಅಧಿಕಾರಿ ಸೇರಿದಂತೆ ಎಸ್.ಪಿ.ಜಿ ಪಡೆಯ ಕಮಾಂಡೋಗಳು ಈಗಾಗಲೇ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.
ಎಸ್.ಪಿ.ಜಿ ಪಡೆಯ ಕಮಾಂಡೋಗಳು ಮತ್ತು ಐಜಿ ಶ್ರೇಣಿಯ ಅಧಿಕಾರಿ ಪ್ರಧಾನಿ ಭೇಟಿ ನೀಡಲಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸಿಬ್ಬಂದಿಗಳು ಈಗಾಗಲೇ ಧರ್ಮಸ್ಥಳದಲ್ಲಿ ಎಲ್ಲೆಡೆ ಪರಿಶೀಲನೆ ನಡೆಸಿದ್ದಾರೆ. ಇಷ್ಟೇ ಅಲ್ಲದೇ ಭದ್ರತಾ ಉಸ್ತುವಾರಿಗೆ ಸಾವಿರಾರು ಪೊಲೀಸರು, 10 ಎಸ್.ಪಿ ಶ್ರೇಣಿಯ ಅಧಿಕಾರಿಗಳು, 150 ಪಿಎಸ್ಐ, ಡಿಎಸ್ಪಿ ಶ್ರೇಣಿ ಅಧಿಕಾರಿಗಳು ಸೇರಿದಂತೆ 2000 ಪೊಲೀಸ್ ಸಿಬ್ಬಂದಿ ಗಳನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ.