ಪಡುಬಿದ್ರಿ, ಫೆ 05(SM): ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವಯುಗ ಕಂಪೆನಿಯ ಟೋಲ್ ಗೇಟ್ ನಲ್ಲಿ ಸ್ಥಳೀಯರಿಂದ ಟೋಲ್ ಸಂಗ್ರಹವನ್ನು ವಿರೋಧಿಸಿ ಇಂದು ಮುಲ್ಕಿ ಪೇಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಬಂದ್ ಗೆ ಮೂಲ್ಕಿ ಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನಪ್ರತಿನಿಧಿಗಳು, ಧರ್ಮಗುರುಗಳು, ವಿದ್ಯಾರ್ಥಿಗಳು ಪ್ರತೀಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮುಲ್ಕಿ ಅಭಿವೃದ್ದಿ ನಾಗರಿಕಾ ವೇದಿಕೆ ಈ ಬಂದ್ ಗೆ ಕರೆ ನೀಡಿದ್ದು, ಇದೇ ಸಂದರ್ಭದಲ್ಲಿ ಮುಲ್ಕಿ ಬಸ್ ನಿಲ್ದಾಣದಿಂದ ಹೆಜಮಾಡಿ ಟೋಲ್ ಕೇಂದ್ರದ ವರೆಗೆ ಪಾದಯಾತ್ರೆ ನಡೆಸಿ ಬಳಿಕ ಧರಣಿ ನಡೆಸಲಾಯಿತು. ನವಯುಗ ಕಂಪನಿಯ ವಿರುದ್ಧ ಜಾಥಾ ಮೂಲಕ ಹೆಜಮಾಡಿ ಟೋಲ್ ಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ.
ಇನ್ನು ಪ್ರತಿಭಟನೆಗೆ ಸ್ಥಳೀಯ ಆಟೋ ಚಾಲಕರು, ನಾಗರಿಕರು, ವರ್ತಕರು ಬೆಂಬಲ ಘೋಷಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಅಮರನಾಥ್ ಶೆಟ್ಟಿ, ವಿನಯ್ ಕುಮಾರ್ ಸೊರಕೆ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಪಾಲ್ಗೊಂಡಿದ್ದರು.