ಉಡುಪಿ, ಫೆ 05(SM): ಮಲ್ಪೆ ಬಂದರಿನಿಂದ ಹೊರಟು ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ನ ಪತ್ತೆಗೆ ನೌಕಾಪಡೆಯ ಅಧಿಕಾರಿಗಳು ಸಮುದ್ರದಲ್ಲಿ 35 ಮೀಟರ್ ಆಳದವರೆಗೆ ಶೋಧ ನಡೆಸಿದ್ದಾರೆ. ಇಷ್ಟಕ್ಕೆ ನಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ. ಮುಂದಿನ ಹಂತದಲ್ಲಿ 60 ಮೀಟರ್ ಆಳಕ್ಕೆ ಇಳಿದು ಶೋಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.
ನೌಕಾಪಡೆಯ ಹಡಗಿನ ತಳಕ್ಕೆ ಹಾನಿಯಾಗಿರುವ ಸಮಯ, ಸುವರ್ಣ ತ್ರಿಭುಜದ ಸಂಪರ್ಕ ಕಡಿತ ಆಗಿರುವ ಸಮಯ ಇತ್ಯಾದಿಗಳ ಬಗ್ಗೆ ಸಂಶಯಗಳಿವೆ. ಹುಡುಕಾಟದ ವೇಳೆ ನೌಕಾಪಡೆಗೆ ಸಾಗರ ತಳದಲ್ಲಿ 23 ಮೀಟರ್ ಉದ್ದದ ಬೋಟೊಂದು ಕಂಡು ಬಂದಿದೆ. ಆದರೆ ಆಳದಲ್ಲಿ ಇರುವುದರಿಂದ ಸ್ಪಷ್ಟವಾಗಿ ಗೋಚರವಾಗಿಲ್ಲ.
ಈ ಹಿಂದೆ ಯಾವತ್ತೋ ಮುಳುಗಿದ್ದ ಬೋಟಿನ ಅವಶೇಷವೋ ಎಂಬುದೂ ಸ್ಪಷ್ಟವಾಗಿಲ್ಲ. ಸುವರ್ಣ ತ್ರಿಭುಜ ಬೋಟ್ 24 ಮೀಟರ್ ಇರುವುದರಿಂದ ಅದಕ್ಕೂ ಇದಕ್ಕೂ ತಾಳೆಯಾಗುವುದಿಲ್ಲ. ಸರಿಯಾದ ಪರಿಶೀಲನೆ ನಡೆಸಿದಾಗ ನಮ್ಮ ಎಲ್ಲ ಸಂಶಯಗಳಿಗೆ ಪರಿಹಾರ ಸಿಗಲಿದೆ ಎಂದರು.
ಇನ್ನು ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂಬ ಹಲವು ವಂದತಿಗಳು ಎಲ್ಲೆಡೆ ಹರಡುತ್ತಿದ್ದು ಈ ವದಂತಿಗಳು ಸತ್ಯವಾಗಲಿ ಎಂದರು.