ಕಾರ್ಕಳ, ಫೆ 05(SM): ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯಚರಿಸುತ್ತಿದ್ದು, ಅಲೆಮಾರಿ ಜಾನುವಾರುಗಳನ್ನು ಅಮಾನುಷವಾಗಿ ಕಡಿದು, ಅದರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವ ಘಟನಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ.
ಮುಡಾರು ಆಲ್ದಟ್ಟ ಸೇತುವೆಯ ತಳಭಾಗದಲ್ಲಿ ಕಪ್ಪು ಬಣ್ಣದ ಕರುವೊಂದರ ತಲೆ, ಚರ್ಮ ಹಾಗೂ ದೇಹದ ಇತರ ಭಾಗವನ್ನು ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಎಸೆಯಲಾಗಿದೆ. ಈ ಪ್ರಕರಣ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿಯಿಂದ ರವಿವಾರ ನಸುಕಿನ ಜಾವದೊಳಗಾಗಿ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.
ಬಜಗೋಳಿ ಪರಿಸರದಲ್ಲಿ ಸಾಕು ಕರುಗಳನ್ನು ಒಂದೆಡೆಯಲ್ಲಿ ಕೂಡಿ ಹಾಕಿರುವುದು, ನಿಟ್ಟೆ ಪರಿಪ್ಪಾಡಿಯಲ್ಲಿ ವಧಿಸಿದ ದನದ ತಲೆ, ಕಾಲು, ಚರ್ಮ ಪತ್ತೆಯಾಗಿರುವುದು, ಬಜಗೋಳಿ-ಹೊಸ್ಮಾರು ನಡುವೆ ದನ ಸಾಗಿಸುತ್ತಿದ್ದ ಪ್ರಕರಣ ಪತ್ತೆ ಯಾಗಿರುವುದು, ಮುದ್ರಾಡಿಯಲ್ಲಿ ಜಾನುವಾರುಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ವಾಹನವೊಂದು ಪತ್ತೆಯಾಗಿರುವುದು ಅಕ್ರಮ ಕಸಾಯಿಖಾನೆಗಳ ಕ್ರೌರ್ಯವನ್ನು ತೋರಿಸುತ್ತಿದೆ.
ಈ ನಡುವೆ ಕರುಗಳನ್ನೇ ವಧಿಸಿ ಅದರ ಮಾಂಸವನ್ನು ಆಡು, ಕುರಿಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುವ ಜಾಲ ಸಕ್ರಿಯಾಗೊಂಡಿದೆ.