ಮಂಗಳೂರು, ಫೆ 06(SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಸಂಬಂಧಿಸಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮಾತ್ರವಲ್ಲದೆ, ಈಗಾಗಲೇ ಜಿಲ್ಲೆಯಲ್ಲಿ ಪತ್ತೆಯಾದ ಸತ್ತ ಮಂಗಗಳಲ್ಲಿಯೂ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 22 ಸತ್ತ ಮಂಗಗಳು ಪತ್ತೆಯಾಗಿವೆ. ಐದು ಮಂಗಗಳ ಮೃತದೇಹದ ಮಾದರಿಯನ್ನು ಕಾಯಿಲೆ ಇರುವ ಬಗ್ಗೆ ತಪಾಸಣೆಗಾಗಿ ಪುಣೆಗೆ ಕಳುಹಿಸಲಾಗಿತ್ತು. ಅದರಲ್ಲಿ ನಾಲ್ಕು ಮಾದರಿಗಳ ವರದಿಗಳು ಬಂದಿದ್ದು, ಕಾಯಿಲೆ ಇಲ್ಲದಿರುವುದು ದೃಢಪಟ್ಟಿದೆ ಎಂದರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ 11 ಮಂದಿ ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ಕೂಡಾ ತಪಾಸಣೆಗೆ ಕಳುಹಿಸಲಾಗಿದೆ. ಇದರಲ್ಲಿ ರೋಗ ಇಲ್ಲದಿರುವುದು ದೃಢಪಟ್ಟಿದೆ. ಜಿಲ್ಲೆಯ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಡಿಹೆಚ್ ಒ ತಿಳಿಸಿದ್ದಾರೆ.