ಬೆಂಗಳೂರು, ಫೆ 7(MSP):ಕರ್ನಾಟಕ, ಕೇರಳ ಸೇರಿ ಕರಾವಳಿಯ ವಿಶೇಷ ಆರ್ಥಿಕ ವಲಯದ (ಇಇಝುಡ್ ) ವ್ಯಾಪ್ತಿಯ ಆಳ ಸಮುದ್ರದಲ್ಲಿ ಬೆಳಕು ಮೀನುಗಾರಿಕೆ ಅಥವಾ ಬುಲ್ ಅಥವಾ ಪೇರ್ ಟ್ರಾಲಿಂಗ್ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಪಾಲಿಸುವಂತೆ ಉಡುಪಿಯ ಮಲ್ಪೆ ಬಂದರಿನ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರ ದೇಶದ ಕರಾವಳಿಯ ಆಳ ಸಮುದ್ರದಲ್ಲಿ 12 ನಾಟಿಕಲ್ ಮೈಲ್ ಆಚೆಗೆ ಬೆಳಕು ಮೀನುಗಾರಿಕೆ ಅಥವಾ ಬುಲ್ ಅಥವಾ ಪೇರ್ ಟ್ರಾಲಿಂಗ್ನ್ನು ನಿಷೇಧಿಸಿ ಕೇಂದ್ರ ಸರಕಾರ 2017ರ ನ.10ರಂದು ಆದೇಶ ಹೊರಡಿಸಿತ್ತು.
ಉಡುಪಿಯ ಮಲ್ಪೆ ಬಂದರಿನ ಅಖೀಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ|ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ಪೀಠ 'ಈ ಹಿಂದೆ ಷರತ್ತು ಬದ್ಧ ಮೀನುಗಾರಿಕೆಗೆ ಅವಕಾಶ ನೀಡಿ 2018ರ ಡಿ.21ರಂದು ನೀಡಿದ್ದ ಆದೇಶವನ್ನು ಬುಧವಾರ ಮಾರ್ಪಾಡು ಮಾಡಿ ಕೇಂದ್ರದ ಆದೇಶ ಪಾಲನೆ ಮಾಡಲು ಅರ್ಜಿದಾರರಿಗೆ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ವಕೀಲೆ ಎಂ.ಸಿ ನಾಗಶ್ರೀ , ಎಲ್ಇಡಿ, ಹಾಲೋಜನ್ ಮತ್ತಿತರ ಬೆಳಕು ಬಳಸಿ ಸಮುದ್ರದಾಳದಲ್ಲಿ ಯಾಂತ್ರೀಕೃತ ದೋಣಿಗಳ ಮೂಲಕ ಮೀನುಗಾರಿಕೆ ಮಾಡಲಾಗುತ್ತಿದೆ. ಇದರಿಂದ ಅಪರೂಪದ ಮೀನಿನ ಸಂತತಿ ಮತ್ತು ಮೀನು ಮರಿಗಳನ್ನೂ ಸಹ ಹಿಡಿಯಲಾಗುತ್ತಿತ್ತು. ಇದು ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರದ ಕ್ರಮವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಅರ್ಜಿದಾರರ ಪರ ವಕೀಲರು, ಕೋಟ್ಯಂತರ ರೂ. ಬಂಡವಾಳ ಹೂಡಿ ಯಾಂತ್ರೀಕೃತ ದೋಣಿ ಖರೀದಿಸಿ ಬೆಳಕು ಬಳಸಿ ಮೀನುಗಾರಿಕೆ ಮಾಡಲಾಗುತ್ತಿದ್ದು, ಕೇಂದ್ರದ ನಿರ್ಧಾರದಿಂದ ಅದನ್ನೇ ಅವಲಂಬಿಸಿರುವ ಕುಟುಂಬಗಳಿಗೆ ತೊಂದರೆ ಆಗಿದೆ.ಕೇಂದ್ರದ ಆದೇಶ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಪತ್ರ ಬರೆದು ಮನವಿ ಮಾಡಿದ್ದರೂ ಅದಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ದೂರಿದರು.