ಮಂಗಳೂರು, ಫೆ 7(MSP): ಲಂಚ ಸ್ವೀಕಾರ ಪ್ರಕರಣದಲ್ಲಿ ಗ್ರಾಮ ಕರಣಿಕ ಸೇರಿದಂತೆ ಇಬ್ಬರು ಆರೋಪಿಗಳಿಗೆ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಬಂಟ್ವಾಳ ತಾಲೂಕು ನಾವೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಕರಣಿಕನಾಗಿದ್ದ ಎನ್.ಹೊನ್ನಪ್ಪ (33) ಹಾಗೂ ಖಾಸಗಿ ವ್ಯಕ್ತಿ ವಿಕ್ಟರ್ ಪಿಂಟೋ (76) ಶಿಕ್ಷೆಗೆ ಒಳಗಾದವರು. ಹೊನ್ನಪ್ಪ ಜಮೀನಿನ ಖಾತಾ ಬದಲಾವಣೆ ಮಾಡಲು ಸುನಿತಾ ಡಿ’ಸೋಜಾ ಅವರಿಂದ 2011 ಅ.31ರಂದು 3 ಸಾವಿರ ರೂ. ಲಂಚ ಪಡೆದಿದ್ದರು. ವಿಕ್ಟರ್ ಇದಕ್ಕೆ ಸಹಕಾರ ನೀಡಿದ್ದರು. ಅಂದಿನ ಲೋಕಾಯುಕ್ತ ಇನ್ ಸ್ಪೆಕ್ಟರ್ ಆಗಿದ್ದ ಉದಯ್ ನಾಯಕ್ ದಾಳಿ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದರು.
ನ್ಯಾಯಾಧೀಶರಾದ ಬಿ.ಮುರಳೀಧರ ಪೈ ಅವರು ವಿಚಾರಣೆ ನಡೆಸಿ ಗ್ರಾಮ ಕರಣಿಕ ಎನ್.ಹೊನ್ನಪ್ಪನಿಗೆ ಒಂದು ವರ್ಷ ಸಾದಾ ಸಜೆ,10 ಸಾವಿರ ದಂಡ, ವಿಕ್ಟರ್ ಪಿಂಟೋ ಖಾಸಗಿ ವ್ಯಕ್ತಿಯಾಗಿದ್ದು, ಪ್ರಸ್ತುತ 76 ವರ್ಷದವರಾಗಿದ್ದು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ 9 ದಿನಗಳ ಸಾದಾ ಸಜೆ ಮತು 5 ಸಾವಿರ ರೂ ದಂಡ ವಿಧಿಸಿದ್ದಾರೆ. ಇಬ್ಬರಿಗೂ ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿದೆ. ಮಂಗಳೂರು ಲೋಕಾಯುಕ್ರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್ ಎನ್ ರಾಜೇಶ್ ವಾದಿಸಿದ್ದರು.