ಬೆಂಗಳೂರು, ಫೆ 8(MSP): ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಸಂಬಂಧ ರಾಜಶೇಖರಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮಾನ್ಯ ಮಾಡಿದೆ.
‘ಸ್ವಾಮೀಜಿಗೆ ಸಮನ್ಸ್ ಜಾರಿಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಮ ಏಕಪಕ್ಷೀಯವಾಗಿದೆ. ದೋಷಾರೋಪಣೆ ಪಟ್ಟಿಯಲ್ಲಿ ಸ್ವಾಮೀಜಿ ವಿರುದ್ಧದ ಅಪರಾಧ ಸಾಬೀತುಪಡಿಸುವ ಯಾವ ಅಂಶಗಳೂ ಇಲ್ಲ’ ಎಂಬ ಆಧಾರದಲ್ಲಿ ನ್ಯಾಯಪೀಠ ಪ್ರಕರಣ ರದ್ದುಗೊಳಿಸಿದೆ.
ಪ್ರಕರಣದ ವಿವರ
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪ್ರದೇಶದಲ್ಲಿ 2014ರ ಡಿಸೆಂಬರ್ 5ರಂದು ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಸ್ವಾಮೀಜಿ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಡಿಸೆಂಬರ್ 6ರಂದು ವಾಮಂಜೂರು ಜಂಕ್ಷನ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.ಈ ಸಂಬಂಧ ಪೊಲೀಸರು ಸ್ವಾಮೀಜಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. 2017ರ ಮೇ 3ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಆಗಸ್ಟ್ 19ರಂದು ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.
ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು.