ಕೋಟ, ಫೆ 8(MSP): ಉಡುಪಿ ಜಿಲ್ಲೆಯಲ್ಲೇ ಭೀತಿ ಸೃಷ್ಟಿಸಿದ್ದ ಇಲ್ಲಿನ ಮಣೂರು ಚಿಕ್ಕನಕೆರೆಯಲ್ಲಿ ಜ.26 ರಂದು ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಶೌಚಾಲಯದ ಪಿಟ್ ವಿವಾದದಲ್ಲಿ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆಯಾದರೂ, ಕೊಲೆಯ ಹಿಂದೆ ಇದೀಗ ಬೇರೆಯೇ ಕಾರಣಗಳು ಕೇಳಿಬರುತ್ತಿದೆ.
ಈ ನಡುವೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಹರೀಶ್ ರೆಡ್ಡಿ ಸಹೋದರ ರಾಜಶೇಖರ ರೆಡ್ಡಿ ಹಾಗೂ ತಲ್ಲೂರು ನಿವಾಸಿ ರವಿ ಯಾನೆ ಮೆಡಿಕಲ್ ರವಿ ಎಂಬಾತನನ್ನು ಪೊಲೀಸರು ಗುರುವಾರ ಮಡಿಕೇರಿಯಿಂದ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಪ್ರಮುಖ ಆರೋಪಿ ಹರೀಶ್ ರೆಡ್ಡಿ ಬಂಧನ ಬಾಕಿಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ನಾನಾದೃಷ್ಟಿಯಿಂದ, ತನಿಖಾ ನಡೆಯುತ್ತಿದ್ದರೂ ಇಲಾಖೆ ಹೆಚ್ಚಿನ ರಹಸ್ಯವನ್ನು ಬಿಟ್ಟುಕೊಡುತ್ತಿಲ್ಲ. ವಶಪಡಿಸಿಕೊಂಡ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ. ಇನ್ನೊಂದೆಡೆ ಸ್ಥಳೀಯ ಜನಪ್ರತಿನಿಧಿಯೋರ್ವನನ್ನು ಕೂಡ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಇದನ್ನು ಇನ್ನೂ ದೃಢೀಕರಿಸಿಲ್ಲ.
ಯತೀಶ್ ಕಾಂಚನ್, ಭರತ್ ಶ್ರೀಯಾನ್ ಅವರ ಕೊಲೆಗೆ ಸಂಬಂಧಿಸಿ ರಾಜಶೇಖರ ರೆಡ್ಡಿ. ಚಂದ್ರಶೇಖರ ರೆಡ್ಡಿ ಹಾಗೂ ಇತರ ನಾಲ್ವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದ ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಅವರು ಕೂಡ ಶೀಘ್ರದಲ್ಲೇ ಸೆರೆ ಸಿಗುವ ಸಾಧ್ಯತೆ ಇದೆ