ಉಡುಪಿ, ಫೆ 8 (MSP): ಐವತ್ತು ಸಾವಿರ ಮೌಲ್ಯದ ಚಿನ್ನಾಭರಣವಿದ್ದ ಪರ್ಸ್ನ್ನು ಕಳೆದುಕೊಂಡಿದ್ದ ಮಹಿಳೆಗೆ ವಾಪಸ್ಸು ನೀಡುವ ಮೂಲಕ ಉಡುಪಿ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಫೆ. 7 ರ ಗುರುವಾರ ಸಾಯಂಕಾಲ 5.30 ಸುಮಾರಿಗೆ ಕಿರಾಡಿ ನಿವಾಸಿ ಅನುಷಾ ಶೆಟ್ಟಿ ತನ್ನ ಮಗುವಿನೊಂದಿಗೆ ಕಿರಾಡಿಯಲ್ಲಿರುವ ಮನೆಗೆ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಐಫೋನ್, 50 ಸಾವಿರ ರೂ.ಮೌಲ್ಯದ ಚಿನ್ನಾಭರಣ, 4 ಸಾವಿರ ನಗದು ಇದ್ದ ಪರ್ಸ್ ಗಮನಕ್ಕೆ ಬಾರದೆ ರಿಕ್ಷಾದಿಂದ ರಸ್ತೆಗೆ ಬಿದ್ದುಹೋಗಿತ್ತು. ಮನೆಗೆ ಹೋಗಿ ನೋಡುವಾಗ ಪರ್ಸ್ ಇಲ್ಲದ್ದನ್ನು ಕಂಡು ಅನುಷಾ ಆತಂಕಗೊಂಡರು. ಅದೇ ದಾರಿಯಲ್ಲಿ ಉಡುಪಿಯಿಂದ ನಂಚಾರಿಗೆ ಬಾಡಿಗೆ ಹೋಗುತ್ತಿದ್ದ ಉದ್ಯಾವರ ನಿವಾಸಿ ರಿಕ್ಷಾ ಚಾಲಕ ಪ್ರಕಾಶ್ ಎಂಬುವರು ಪರ್ಸ್ ಬಿದ್ದಿರುವುದು ಕಂಡು, ತೆಗೆದಿಟ್ಟುಕೊಂಡರು. ಸ್ವಲ್ಪ ಹೊತ್ತಿನಲ್ಲೇ ಐಫೋನ್ಗೆ ಬಂದ ಕರೆ ಸ್ವೀಕರಿಸಿ, ಪರ್ಸ್ ತನಗೆ ಸಿಕ್ಕಿರುವುದಾಗಿ ತಿಳಿಸಿದ್ದಾರೆ. ಬಳಿಕ ಮಹಿಳೆಗೆ ಪರ್ಸ್ನ್ನು ಮರಳಿಸಿದ್ದಾರೆ. ರಿಕ್ಷಾ ಚಾಲಕ ಪ್ರಕಾಶ್ ಪ್ರಾಮಾಣಿಕ ನಡತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.