ಬೆಂಗಳೂರು, ಅ 27: ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿರುವ ಹಿನ್ನಲೆ, ಮಾಜಿ ಗೃಹ ಸಚಿವ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಆತಂಕಕ್ಕೆ ಸಿಲುಕಿದ್ದರು. ಆದರೆ ಎಫ್ ಐ ಆರ್ ದಾಖಲಾದ ತಕ್ಷಣ ರಾಜೀನಾಮೆ ನೀಡುವ ಅಗತ್ಯವಿಲ್ಲ. ಕೆ.ಜೆ ಜಾರ್ಜ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಹಿನ್ನಲೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಈ ಹಿಂದೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತದ ನಂತರ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿತ್ತು. ಆಗ ಜಾರ್ಜ್ ಗೃಹ ಸಚಿವರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು. ಇವತ್ತು ತನಿಖೆ ನಡೆಸುತ್ತಿರುವುದು ಸಿಬಿಐ. ಇವತ್ತು ಜಾರ್ಜ್ ಗೃಹ ಸಚಿವರಾಗಿ ಇಲ್ಲ. ಮಾತ್ರವಲ್ಲದೇ, ಸಿಬಿಐ ಕೇಂದ್ರದ ಅಧೀನದಲ್ಲಿ ಬರುತ್ತದೆ. ಹೀಗಿರುವಾಗ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಕೆ.ಜೆ ಜಾರ್ಜ್ ರಾಜೀನಾಮೆಗಾಗಿ ಬಿಜೆಪಿ ಪ್ರತಿಭಟನೆ ನಡೆಸಿದರೆ ಹೆದರುವುದಿಲ್ಲ. ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯವರ ಬೇಡಿಕೆ ರಾಜಕೀಯ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.