ಮಂಗಳೂರು, ಫೆ 08(SM): ನಗರದ ಪದವಿನಂಗಡಿ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪದವಿನಂಗಡಿ ಕೊರಗಜ್ಜ ಕಟ್ಟೆಯ ಸಮೀಪದ ಯಶಸ್ವಿ ವೆಜ್ & ಫ್ರೂಟ್ ಅಂಗಡಿಯ ಬಳಿ ಅಕ್ರಮವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಕೋಟಿ ಮೈಂದ ಪೂಜಾರಿ ಹಾಗೂ ಪ್ರಶಾಂತ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದವರಿಂದ ಮಟ್ಕಾ ಆಟಕ್ಕೆ ಬಳಸಿದ 17,450/- ರೂ. ನಗದು, ಮಟ್ಕಾ ನಂಬ್ರ ಬರೆದ ಚೀಟಿಗಳು, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಟ್ಕಾ ದಂಧೆಯನ್ನು ಕಾವೂರಿನಲ್ಲಿರುವ ಸುಪ್ರೀಮ್ ಮೋಟಾರ್ ಡ್ರೈವಿಂಗ್ ಸ್ಕೂಲಿನ ಪ್ರಕಾಶ್ ಎಂಬಾತ ನಡೆಸುತ್ತಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸದ್ಯ ಕಾವೂರು ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.