ಕಾಸರಗೋಡು, ಅ 27: ಚಾಲಕನನ್ನು ಬೆದರಿಸಿ ಮರಳು ಸಾಗಾಟ ಲಾರಿಯನ್ನು ಅಪಹರಿಸಿ ಒತ್ತೆ ಹಣಕ್ಕಾಗಿ ಜೀವ ಬೆದರಿಕೆಯೊಡ್ಡಿದ ಹೇಯ ಕೃತ್ಯ ಸೇರಿದಂತೆ ಒಂಭತ್ತಕ್ಕೂ ಅಧಿಕ ಪ್ರಕರಣಗಳ ಆರೋಪಿಯನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೇಳ ಚೌಕಾರಿನ ಅಕ್ಷಯ್ (26) ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು, ಕುಂಬಳೆ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಷಯ್ ಸೇರಿದಂತೆ ಮೂರು ಜನರ ತಂಡವು ಒಂದು ತಿಂಗಳ ಹಿಂದೆ ಕರ್ನಾಟಕದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬದಿಯಡ್ಕ ಸಮೀಪದ ನೀರ್ಚಾಲು ಎಂಬಲ್ಲಿ ತಡೆದು ಚಾಲಕನನ್ನು ಬೆದರಿಸಿ ಬೇಳ ಸಮೀಪದ ಕಾರ್ಗಿಲ್ ಎಂಬ ನಿರ್ಜನ ಸ್ಥಳಕ್ಕೆ ಅಪಹರಿಸಿಕೊಂಡೊಯ್ದು ಹಣಕ್ಕಾಗಿ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದರು.
ಅಕ್ಷಯ್ ವಿರುದ್ಧ ಬದಿಯಡ್ಕ, ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಡೆದಾಟ, ಬೆದರಿಕೆ, ಇರಿತ, ವರ್ತಕನ ಮೇಲೆ ಹಲ್ಲೆ ಸೇರಿದಂತೆ ಅನೇಕ ಪ್ರಕರಣಗಳಿವೆ. 2013 ರ ಬಳಿಕ ಹಲವು ಕೃತ್ಯಗಳಲ್ಲಿ ಶಾಮೀಲಾಗಿದ್ದ, ಈತನ ವಿರುದ್ಧ ಬದಿಯಡ್ಕ ಪೊಲೀಸರು ಆರ್.ಡಿ .ಒ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಈತನ ವಿರುದ್ಧ ಗೂಂಡಾ ಕಾಯ್ದೆಯನ್ನು ಹೂಡಲಾಗಿದೆ.