ಮಂಗಳೂರು, ಫೆ 09(SM): ಮಂಗಳೂರು ನಗರದಲ್ಲಿ ಬಹುಮಹಡಿ ಕಟ್ಟಡಗಳು ದಿನಕ್ಕೊಂದರಂತೆ ತೆಲೆ ಎತ್ತುತ್ತಿವೆ. ಆದರೆ ಈ ಕಟ್ಟಡಗಳಲ್ಲಿ ಪಾರ್ಕಿಂಗ್ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಇದೀಗ ಈ ಬಗ್ಗೆ ಪೊಲೀಸ್ ಕಮಿಷನರ್ ಕ್ರಮಕ್ಕೆ ಮುಂದಾಗಿದ್ದಾರೆ.
ಮಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಒದಗಿಸದಿರುವುದು ಮತ್ತು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳ ಅಂಕಿ ಅಂಶ ಸಹಿತ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಕೆಲವು ಬಹು ಮಹಡಿ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್ಗೆ ಮೀಸಲಿರಿಸಿದ ಜಾಗದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದು, ಇದರಿಂದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಬೇಕಾಗಿದೆ. ರಸ್ತೆಗಳನ್ನು ಅಗಲ ಮಾಡಿದ್ದರೂ ಅದೆಲ್ಲವೂ ವಾಹನ ಪಾರ್ಕಿಂಗ್ಗೆ ಅವಕಾಶ ಮಾಡಿ ಕೊಟ್ಟಂತಾಗಿದೆ. ಅಲ್ಲದೆ ಇದರಿಂದ ಸುಗಮ ವಾಹನ ಸಂಚಾರಕ್ಕೆ ತಡೆ ಉಂಟಾಗುತ್ತಿದೆ.
ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪೊಲೀಸರು ಈ ಬಗ್ಗೆ ಒತ್ತಡ ತರಬೇಕು ಎಂದು ನಾಗರಿಕರು ಒತ್ತಾಯಿಸಿದರು. ಕಟ್ಟಡಗಳಲ್ಲಿ ಅಂಗಡಿಗಳನ್ನು ಮಾಡಿರುವವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಕಮಿಷನರ್ ಸೂಚನೆ ನೀಡಿದ್ದಾರೆ.