ಮಂಗಳೂರು, ಫೆ. 08(SM): ಲೋಕಸಭೆ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿವೆ. ಕಾಂಗ್ರೆಸ್ ನಿಂದಲೂ ಚುನಾವಣಾ ಸಿದ್ದತೆ ಚುರುಕುಗೊಂಡಿದೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಗಳ ಲೀಸ್ಟ್ ಕೂಡ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳು ಮಂಗಳೂರು, ಉಡುಪಿಗೆ ಇಂದು ಆಗಮಿಸಿ ಮಾಹಿತಿ ಪಡೆಯಲಿದ್ದಾರೆ.
ಎಐಸಿಸಿ ಕಾರ್ಯದರ್ಶಿಗಳಾದ ಪಿ.ಸಿ. ವಿಷ್ಣುನಾಥನ್, ಮಾಣಿಕಮ್ ಠಾಗೂರ್, ಮಧು ಯಕ್ಷಿ ಗೌಡ ಅವರು ಇಂದು ಉಡುಪಿ-ಚಿಕ್ಕಮಗಳೂರು, ಕಾರವಾರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಬೆಳಗ್ಗೆ 11ಗಂಟೆಯಿಂದ 1 ಗಂಟೆವರೆಗೆ ಉಡುಪಿ ಚಿಕ್ಕಮಗಳೂರು, 2ರಿಂದ 4ರ ವರೆಗೆ ಕಾರವಾರ ಮತ್ತು ಸಂಜೆ 4ರಿಂದ 6ರ ವರೆಗೆ ದ.ಕ. ಕ್ಷೇತ್ರದಲ್ಲಿ ಸಭೆ ನಡೆಸಿ ಮಾಹಿತಿ ಪಡೆಯಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಿಂದಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ಸಚಿವರು, ಶಾಸಕರು, ಕೆಪಿಸಿಸಿ, ಎಐಸಿಸಿ ಜಿಲ್ಲಾ ಉಸ್ತುವಾರಿ ಪ್ರಭಾರಿಗಳು, ಮಾಜಿ ಸಚಿವರು, ಮಾಜಿ ಶಾಸಕರು, ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ತಾ.ಪಂ. ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿ-ಎಐಸಿಸಿ ಸದಸ್ಯರು, ವಿವಿಧ ಘಟಕಗಳ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಲಿದ್ದು, ಅದರಂತೆ ಸಮಿತಿ ಮುಂದಿನ ಕ್ರಮ ಕೈಗೊಳ್ಳಲಿದೆ.
ದ.ಕ. ಜಿಲ್ಲೆಯ ಪೈಕಿ ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಸಂಸದೀಯ ಕಾರ್ಯದರ್ಶಿ ಐವನ್ ಡಿ'ಸೋಜಾ, ಮುಖಂಡರಾದ ಯು.ಕೆ. ಮೋನು, ಮಿಥುನ್ ರೈ ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.