ಮಂಗಳೂರು ಅ28: ಕಾಶಿ ಮಠ ಸಂಸ್ಥಾನದ ಹಿರಿಯ ಸನ್ಯಾಸಿ ಹಾಗೂ ಮಠದ ಉಪ ಆಡಳಿತಾಧಿಕಾರಿಯಾಗಿದ್ದ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ನಿನ್ನೆ ಸಂಜೆ ವರ್ಷಗಳ ಹತ್ಯೆಗೀಡಾದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗರ ಮನೆಗೆ ಭೇಟಿ ನೀಡಿದರು.
ತಮ್ಮ ಶಿಶ್ಯರೊಂದಿಗೆ ಬಾಳಿಗಾರ ಕೋಡಿಯಾಲಬೈಲ್ ನಲ್ಲಿರುವ ಮನೆಗೆ ಭೇಟಿ ನೀಡಿದ ಸ್ವಾಮೀಜಿ, ಬಾಳಿಗ ತಂದೆ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸ್ವಾಮೀಜಿ ಬಳಿ ತಮ್ಮ ಅಳಲನ್ನು ತೋಡಿಕೊಂಡ ಬಾಳಿಗ ತಂದೆ ಹಾಗೂ ಸಹೋದರಿಯರು " ವಿನಾಯಕರಿಗೆ ನ್ಯಾಯ ದೊರಕಿಸಲು ನಾವು ಕಾನೂನು ರೀತಿಯಲ್ಲಿ ಹೋರಾಟ ನಡೆಸುತ್ತಾ ಇದ್ದೇವೆ. ಸಾಮಾಜಿಕ ಕಾರ್ಯಕರ್ತರು,ಹೋರಾಟಗಾರರು ನಮಗೆ ಈ ನಿಟ್ಟಿನಲ್ಲಿ ಸಹಕರಿಸುತ್ತಿದ್ದಾರೆ. ವಿನಾಯಕರನ್ನು ಹತ್ಯೆ ಮಾಡಿದವರು ಹಣ ಹಾಗೂ ತೋಳ್ಬಲ ಇರುವವರು. ರಾಜಕಾರಣದ ಬೆಂಬಲವೂ ಅವರಿಗಿದೆ. ಆದುದರಿಂದ ವಿನಾಯಕರಿಗೆ ಬಂದ ಗತಿ ನಮಗೂ ಬರಲು ಸಾಧ್ಯವಿದೆ. ತಮ್ಮ ಆಗಮನ ಈಗ ಹೊಸ ಧೈರ್ಯ ತಂದಿದೆ. "ಎಂದರು
ಕುಟುಂಬಸ್ಥರ ಅಹಾವಾಲುಗಳಿಗೆ ಉತ್ತರಿಸಿ ಮಾತನಾಡಿದ ಶ್ರೀಗಳು "ವಿನಾಯಕ ಬಾಳಿಗರನ್ನು ಹತ್ಯೆಮಾಡಿದ ಶಕ್ತಿಗಳು ನನ್ನ ಹತ್ಯೆಗೂ ಪ್ರಯತ್ನಿಸಿದ್ದುವು . ಪೂನದಲ್ಲಿರುವಾಗ ಕಾರಿಗೆ ಲಾರಿ ಢಿಕ್ಕಿ ಹೊಡೆಸಿ ನನ್ನ ಕೊಲೆಗೆ ಯತ್ನಿಸಲಾಯಿತು. ತದನಂತರ ಕೊಚ್ಚಿಯಲ್ಲಿ ರಿವಾಲ್ವರ್ ಹಿಡಿದ ಇಬ್ಬರು ನನ್ನ ಕೋಣೆಗೆ ನುಗ್ಗಿದ್ದರು. ದೇವರ ಕೃಪೆಯಿಂದ ನಾನು ನಾನು ಇಂದಿಗೂ ಜೀವಂತವಾಗಿದ್ದೇನೆ. ವೆಕ್ತಿಯನ್ನು ಇಲ್ಲದಾಗಿಸಬಹುದು ಆದರೆ ಸತ್ಯವನ್ನು ಎಂದಿಗೂ ಇಲ್ಲದಾಗಿಸಲು ಸಾಧ್ಯವಿಲ್ಲ. ವಿನಾಯಕರ ಹತ್ಯೆಯು ನನ್ನ ಗಮನಕ್ಕೆ ಬಂದಿತ್ತು. ಆದರೆ ಆಗ ವಿಭಿನ್ನ ಪರಿಸ್ಥಿತಿಯಿದ್ದ ಕಾರಣ ನನಗೆ ಮನೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೂ ಮಂಗಳೂರಿಗೆ ಬಂದ ತಕ್ಷಣ ಇಲ್ಲಿಗೆ ಭೇಟಿ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದೆ. ಇನ್ನು ಮುಂದಿನ ನಿಮ್ಮ ಹೋರಾಟಗಳಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಕೋರ್ಟ್ ಕಛೇರಿಗಾಗಿ ಆರ್ಥಿಕ ವ್ಯಯದ ಅಗತ್ಯವೂ ಇದೆ. ಆದುದರಿಂದ ವಿನಾಯಕರ ಹೆಸರಲ್ಲಿ ಹೋರಾಟಕ್ಕಾಗಿ ಒಂದು ಟ್ರಸ್ಟ್ ರೂಪಿಸುವುದಾದರೆ ಅದಕ್ಕೆ ಮೊದಲ ಧನಸಹಾಯವನ್ನು ನಾನು ನಮ್ಮ ಮಠದ ಪರವಾಗಿ ನೀಡಲಿದ್ದೇನೆ" ಎಂದು ಹೇಳಿದರು.