ಕುಂದಾಪುರ,ಫೆ 10 (MSP): ತಿರುವೊಂದರಲ್ಲಿ ಏಕಾಏಕೀ ಅಡ್ಡ ಬಂದ ಸೈಕಲ್ ಸವಾರನನ್ನು ತಪ್ಪಿಸಲು ಯತ್ನಿಸಿದ ಬೈಕ್ ಸವಾರ ಇಪ್ಪತ್ತೈದು ನಿಮಿಷಗಳ ಬಳಿಕ ಗಂಭೀರಗೊಂಡು ಸಾವನ್ನಪ್ಪಿದ ವಿಚಿತ್ರ ಘಟನೆ ಬೈಂದೂರು ಠಾಣಾ ವ್ಯಾಪ್ತಿಯ ಉಪ್ಪುಂದ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ವಿಚಿತ್ರವಾಗಿ ಸಾವನ್ನಪ್ಪಿದ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ಶೀನ ಆಚಾರ್ ಎಂಬುವರ ಪುತ್ರ ಗಿರೀಶ(27) ಎಂದು ತಿಳಿದು ಬಂದಿದೆ.
ಶನಿವಾರ ಬೆಳಿಗ್ಗೆ ಗಿರೀಶ್ ಆಚಾರ್ಯ ತನ್ನ ಬೈಕಿನಲ್ಲಿ ಮನೆ ಕಡೆಯಿಂದ ಉಪ್ಪುಂದಕ್ಕೆ ತನ್ನ ಕೆಲಸಕ್ಕೆಂದು ಬರುತ್ತಿದ್ದ. ಇದೇ ಸಂದರ್ಭ ಹಿರಿಯ ವ್ಯಕ್ತಿಯೊಬ್ಬರು ಸೈಕಲ್ಲಿನಲ್ಲಿ ಒಳ ರಸ್ತೆಯಿಂದ ಬರುತ್ತಿದ್ದರು. ಇದನ್ನು ಗಮನಿಸಿದ ಗಿರೀಶ್ ಸೈಕಲ್ ಸವಾರನನ್ನು ತಪ್ಪಿಸಲೆಂದು ಬೈಕ್ನ ಎರಡೂ ಬ್ರೇಕ್ಸ್ ಅದುಮಿದ ಪರಿಣಾಮ ಕಾಂಕ್ರೀಟ್ ರಸ್ತೆಯಲ್ಲಿ ಸ್ಕಿಡ್ ಆಗಿ ಸೈಕಲ್ಲಿಗೆ ಡಿಕ್ಕಿ ಹೊಡೆದಿದ್ದಾರೆನ್ನಲಾಗಿದೆ. ಘಟನೆಯಲ್ಲಿ ಸೈಕಲ್ ಸವಾರ ಹಾಗೂ ಗಿರೀಶ್ ಇಬ್ಬರೂ ರಸ್ತೆಗೆ ಬಿದ್ದಿದ್ದು, ಸೈಕಲ್ ಸವಾರರಿಗೆ ಸ್ವಲ್ಪ ಗಾಯಗಳಾಗಿತ್ತು. ಗಿರೀಶ್ಗೆ ಕೆನ್ನೆಯ ಭಾಗದಲ್ಲಿ ಸಣ್ಣ ಗಾಯವಾಗಿತ್ತು. ತಕ್ಷಣ ಸ್ಥಳೀಯರು ಸೇರಿ ಇಬ್ಬರನ್ನು ಎತ್ತಿದ್ದು, ಬಳಿಕ ಸೈಕಲ್ ಸವಾರನನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಸ್ಥಳೀಯರ ಜೊತೆಗೆ ಬೈಕ್ ಸವಾರ ಗಿರೀಶ್ ಬೈಂದೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಯವರೆಗೂ ಅಂದರೆ ಅಪಘಾತ ಸಂಭವಿಸಿ 25 ನಿಮಿಷಗಳ ಕಾಲ ಎಲ್ಲರ ಜೊತೆಗೆ ಮಾತನಾಡುತ್ತಾ ಓಡಾಡುತ್ತಿದ್ದ ಗಿರೀಶ್ಗೆ ಇದ್ದಕ್ಕಿದ್ದಂತೆ ವಾಂತಿಯಾಗಿದ್ದು, ಮೂಗು ಹಾಗೂ ಬಾಯಲ್ಲಿ ಧಾರಾಕಾರವಾಗಿ ರಕ್ತ ಬರಲಾರಂಭಿಸಿದೆ. ತಕ್ಷಣ ಗಿರೀಶ್ನನ್ನು ಕುಂದಾಪುರದ ಖಾಸಗೀ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಗಂಭೀರವಾಗಿದ್ದ ಆತನನ್ನು ಮಣಿಪಾಲದ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚನೆ ನೀಡಿದ್ದು, ರಸ್ತೆ ಮಧ್ಯೆ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭ ರಕ್ತ ಹೆಪ್ಪುಗಟ್ಟಿದ್ದು, ಶ್ವಾಸಕೋಶದಲ್ಲಿ ಶ್ವಾಸಕೋಶದಲ್ಲಿ ರಕ್ತ ಸಂಗ್ರಹವಾಗಿ ಒಮ್ಮಿಂದೊಮ್ಮೆಲೆ ಸ್ಪೋಟಗೊಂಡು ಸಾವು ಸಂಭವಿಸಿರನಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
ಗಿರೀಶ್ ಸ್ಥಳೀಯವಾಗಿ ಉತ್ತಮ ಒಡನಾಟ ಹೊಂದಿದ್ದು, ಸಾಮಾಜಿಕ ಕಾರ್ಯಕರ್ತನಾಗಿದ್ದ. ಉಪ್ಪುಂದದ ಎಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಡು ಬಡತನದಲ್ಲಿದ್ದ ಗಿರೀಶ್ ಸಾವು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ತಂದಿದೆ. ಗಾಯಗೊಂಡಿದ್ದ ಸೈಕಲ್ ಸವಾರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.