ಮಂಗಳೂರು ಅ28:ಮಂಗಳೂರು -ಮೂಡುಬಿದ್ರಿ ಮೂಲಕ ಹಾದು ಹೋಗುವ ರಾಶ್ಟ್ರೀಯ ಹೆದ್ದಾರಿ 169 ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆ. ರಾಜ್ಯ ಹೆದ್ದಾರಿಯಿಂದ ರಾಶ್ಟ್ರೀಯ ಹೆದ್ದಾರಿಗಿ ಕೇವಲ ಹೆಸರು ಮಾತ್ರ ಬದಲಾಗಿದೆಯಲ್ಲದೆ ರಸ್ತೆಯನ್ನು ರಾಶ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ಯಾವುದೇ ಕಾರ್ಯ ಇನ್ನೂ ಆಗಿಲ್ಲ. ಮಂಗಳೂರು ಲೋಕ ಸಭಾ ಸದಸ್ಯರು ಈ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ ಆದುದರಿಂದ ತಿಂಗಳೊಳಗೆ ಹದಗೆಟ್ಟಿರುವ ರಸ್ತೆಯ ಕನಿಷ್ಟ ದುರಸ್ತಿಕರಣವನ್ನಾದರೂ ಮಾಡದಿದ್ದರೆ ಸ್ವತ: ರಸ್ತೆ ತಡೆಗೆ ನೇತೃತ್ವ ನೀಡುವೆನೆಂದು ಸರಕಾರದ ಮುಖ್ಯ ಸಚೇತಕ ಐವನ್ ಡಿ ಸೋಜ ಎಚ್ಚರಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾನಾಡಿದ ಅವರು "ಜಿಲ್ಲೆಯನ್ನು ಪ್ರತಿನಿಧಿಕರಿಸುತ್ತಿರುವ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಅಭಿವ್ರದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಹೊಂದಿಲ್ಲ. ರಾಶ್ಟ್ರೀಯ ಹೆದ್ದಾರಿ 169 ಇದಕ್ಕೆ ಪ್ರಮುಖ ಸಾಕ್ಷಿ. ಕೇವಲ ಸಣ್ಣ ನೆಪಗಳನ್ನು ಮುಂದಿಟ್ಟುಕೊಂಡು ರಾಶ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಮುಂದಾಗುತ್ತಿಲ್ಲ. ಕೇಂದ್ರದಲ್ಲಿ ಸ್ವಂತ ಪಕ್ಷದ ಸರ್ಕಾರವಿದ್ದೂ ನಮ್ಮ ಲೋಕಸಭಾ ಸದಸ್ಯರು ಏನೂ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದ. ನಂತೂರು,ಪಂಪ್ ವೆಲ್ ಸೇತುವೆ ಕಾಮಗಾರಿಗಳು ಕುಂಟುತ್ತಿವೆ. ಪಡೀಲ್ ಪರಿಸರದ ಹೆದ್ದಾರಿ ನರಕ ಸದೃಶವಾಗಿ ಮಾರ್ಪಾಡಾಗಿದೆ. ಒಂದರ್ಥದಲ್ಲಿ ಕೇಂದ್ರ ಸರ್ಕಾರವು ದ.ಕ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೇಂದ್ರ ಸರ್ಕಾರದಿಂದ ಇಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಸಂಪೂರ್ಣ ವಿಫಲತೆಯನ್ನು ಕಂಡಿವೆ" ಎಂದು ಅಭಿಪ್ರಾಯಪಟ್ಟರು.