ಧರ್ಮಸ್ಥಳ ಅ28:ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿಯವರನ್ನು ಸ್ವಾಗತಿಸಲು ಡಾ. ವೀರೆಂದ್ರ ಹೆಗ್ಗಡೆ ಮನೆತನ ಹಾಗೂ ಶ್ರೀ ಕ್ಷೇತ್ರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಇದಕ್ಕೆ ಬೇಕಾದ ಅಂತಿಮ ಹಂತದ ಕೆಲಸ ಕಾರ್ಯಗಳು ಹಾಗೂ ಮಾದರಿ ಅಭ್ಯಾಸಗಳು ಈಗಾಗಲೇ ಪೂರ್ಣಗೊಂಡಿದ್ದು ಎಲ್ಲರ ಚಿತ್ತ ನಾಳೆಯ ದಿನದತ್ತ ನೆಟ್ಟಿದೆ. ಪ್ರಧಾನಿ ಕಛೇರಿಯು ಇಂದಿನಿಂದ ಕ್ಷೇತ್ರದ ನಿಯಂತ್ರಣವನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಇಂದಿನ ಎಲ್ಲಾ ಕಾರ್ಯಗಳೂ ಈ ಕಛೇರಿಯ ಮೇಲ್ನೋಟದಲ್ಲೇ ನಡೆಯುತ್ತಿವೆ.
ಪ್ರಧಾನಿಯವರ ಸಾರ್ವಜಣಿಕ ಸಭೆಗೋಸ್ಕರ ಉಜಿರೆ ಸಂಪೂರ್ಣ ಸಿದ್ಧಗೊಂಡಿದ್ದು ಪ್ರದೇಶ ಇದೀಗ ಸಂಪೂರ್ಣವಾಗಿ ಪೋಲಿಸ್ ಸುಪರ್ದಿಯಲ್ಲಿದೆ. ಲಕ್ಷಕ್ಕೂ ಮಿಕ್ಕಿ ಸಾರ್ವಜಣಿಕರು ಮೋದಿಯವರ ಭಾಷಣ ಆಲಿಸಲು ನಾಳೆ ಇಲ್ಲಿಗಾಗಮಿಸಲಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ದಂಡು
ಪ್ರಧಾನಿಯವರ ಕಾರ್ಯಕ್ರಮಗಳನ್ನು ವರದಿ ಮಾಡಲು ರಾಷ್ಟ್ರೀಯ ಹಾಗೂ ರಾಜ್ಯ ಸುದ್ಧಿ ಮಾಧ್ಯಮಗಳ ಬಹು ದೊಡ್ಡ ದಂಡು ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಬೀಡು ಬಿಟ್ಟಿದೆ. ಪ್ರತ್ಯೇಕ ಪರಿಕರಗಳೊಂದಿಗೆ ಆಗಮಿಸಿದ ಪತ್ರಕರ್ತ ಹಾಗೂ ತಂತ್ರಜ್ನಾನರ ತಂಡ ಪ್ರಕೃತಿ ರಮಣೀಯ ತಾಣದಲ್ಲಿ ಪ್ರಧಾನಿಯವರ ಪ್ರತಿಯೊಂದು ನಡೆ ನುಡಿಗಳನ್ನು ಸೆರೆಹಿಡಿಯುವ ಕಾತರದಲ್ಲಿದ್ದಾರೆ.