ಧರ್ಮಸ್ಥಳ, ಫೆ 11(MSP): ಶ್ರೀಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ವಿಶೇಷವಾಗಿ ಜೈನ ಧರ್ಮದ 24ತೀರ್ಥಂಕರರು ತಪಸ್ಸು ಕುಳಿತು ಮೋಕ್ಷ ಹೋದ ವಿವಿಧ ಬಗೆಯ ಗಿಡಗಳು ಜನರನ್ನು ಆಕರ್ಷಿಸುತ್ತಿದ್ದವು.
ಒಂದೊಂದು ತೀರ್ಥಂಕರರಿಗೆ ಒಂದೊಂದು ರೀತಿಯ ಮರಗಳಿವೆ. ಈ ಮರಗಳನ್ನು ಆಗುಂಬೆ ಕಾಡಿನಿಂದ ಹಿಡಿದು ನಾರಾವಿಯಲ್ಲಿ ಇರುವ ತೀರ್ಥಂಕರ ವನದಿಂದ ಗಿಡಗಳನ್ನು ಸಂಗ್ರಹಿಸಲಾಗಿದೆ. ಅಪರೂಪ ಎನ್ನುವಂತೆ ಆದಿನಾಥ ತೀರ್ಥಂಕರರಿಂದ ಮಹಾವೀರ ಸ್ವಾಮಿಯವರೆಗೆ ಅವರ ಮೋಕ್ಷ ಹೋದ ಗಿಡಗಳನ್ನು ಸಂಗ್ರಹಿಸಲಾಗಿದೆ. ಇದೇ ಮೊದಲ ಬಾರಿಗೆ ಮಹಾಮಸ್ತಕಾಭೀಷೆಕ ಸಂದರ್ಭದಲ್ಲಿ ಇಂತಹ ಒಂದು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ತೀರ್ಥಂಕರರನ್ನು ಸ್ಮರಿಸುವಂತಹ ತೀರ್ಥಂಕರ ವನ ಭಕ್ತಿಮೂಡಿಸುವಂತಿದೆ.
ಮೊದಲ ತೀರ್ಥಂಕರರಾದ ಆದಿನಾಥ ಸ್ವಾಮಿಯು ಕೈಲಾಸ ಪರ್ವತದಲ್ಲಿ ವಟ ವೃಕ್ಷದ ಕೆಳಗೆ ತಪ್ಪಸ್ಸು ಮಾಡಿ ಮೋಕ್ಷವನ್ನು ಪಡೆದರು. ೧೨ನೇ ತೀರ್ಥಂಕರ ವಾಸುಪೂಜ್ಯ ಚಂಪಾಪುರಿಯಲ್ಲಿ ಕದಂಬಿ ವೃಕ್ಷದ ಕೆಳಗೆ ಮೋಕ್ಷ ಪಡೆದರು. ಕೊನೆಯ ತೀರ್ಥಂಕರ ಮಹಾವೀರ ಶಾಲ್ಮಲಿ ವೃಕ್ಷದ ಕೆಳಗೆ ಹಾಗೇಯೇ ಉಳಿದ 20 ತೀರ್ಥಂಕರರು ಅಯೋಧ್ಯೆ ಸಮ್ಮೇಧ ಶಿಖರ್ಜಿಯಲ್ಲಿ ವಿವಿಧ ವೃಕ್ಷಗಳ ಕೆಳಗೆ ಮೋಕ್ಷವನ್ನು ಪಡೆದರು. ಇವೆಲ್ಲದರ ಸಾಂಕೇತಿಕವಾಗಿ ಧರ್ಮಸ್ಥಳದ ತೀರ್ಥಂಕರ ವನದಲ್ಲಿ ವಿವಿಧ ವೃಕ್ಷವನ್ನು ಸಂಯೋಜನೆಗೊಳಿಸಲಾಗಿದೆ.
ಒಂದೇ ರೀತಿಯಲ್ಲಿ ಕಾಣುವ ಈ ಮೂರ್ತಿಗಳು ನೋಡುಗರಿಗೆ 24 ತೀರ್ಥಂಕರರಲ್ಲಿ ಯಾವ ತೀರ್ಥಂಕರರು ಎಂದು ಗುರುತಿಸುವುದು ಕಷ್ಟ. ಆದರೆ ಈ ವಿಗ್ರಹಗಳ ಕೆಳಗೆ ಆಯಾ ತೀರ್ಥಂಕರರ ಲಾಂಛನ ಮತ್ತು ಮರದ ಹೆಸರುಗಳು ಇರುವುದರಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಇದರಿಂದ ಇಲ್ಲಿ ಲಾಂಛನ ಮತ್ತು ಮರದ ಹೆಸರಿರುವುದರಿಂದ ಸುಲಭವಾಗಿ ಗುರುತಿಸಬಹುದಾಗಿದೆ.
ವರದಿ: ಸ್ವಸ್ತಿಕಾ ಜೈನ್