ಮಂಗಳೂರು, ಫೆ 11(SM): ಮಂಗಳೂರಿನ ಪಣಂಬೂರು ಮೂಲದ ಧನರಾಜ್ ಎಂ. ಅವರು ಚಂಢೀಗಡದಲ್ಲಿ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪ್ರಥಮ ದಕ್ಷಿಣ ಭಾರತದ ಯುವಕ ಎನಿಸಿಕೊಂಡಿದ್ದಾರೆ.
ಸರಕಾರದ ಅಂಗೀಕೃತ ಫೆಡರೇಷನ್ ಆಫ್ ಬಾಡಿ ಬಿಲ್ಡಿಂಗ್ ಎಸೋಸಿಯೇಷನ್ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಇವರು ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಇನ್ನೂರ ಐವತ್ತು ಸ್ಪರ್ಧಿಗಳನ್ನು ಹಿಂದಿಕ್ಕಿ ಕರಾವಳಿಗೆ ಪ್ರಥಮ ಪ್ರಶಸ್ತಿ ತಂದೊಪ್ಪಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟು ಹತ್ತು ರೌಂಡು ಇರುವ ಈ ಸ್ಪರ್ಧೆಯಲ್ಲಿ ದೆಹಲಿಯ ಸ್ಪರ್ಧಾಳುವನ್ನು ಹಿಂದಿಕ್ಕಿ ವಿಜೇತರಾದರು.
ಸರಕಾರದ ನೆರವಿಲ್ಲದೆ ಪ್ರಶಸ್ತಿ ಗಳಿಸಿದ ಧೀರ:
ಬಾಡಿ ಬಿಲ್ಡಿಂಗ್ ಗೆ ಲಕ್ಷಾಂತರ ಖರ್ಚು ಮಾಡ ಬೇಕಾದ ಅವಶ್ಯಕತೆಯಿದ್ದು ಸರಕಾರದಿಂದ ಯಾವುದೇ ನೆರವಿಲ್ಲದೆ ದಾನಿಗಳ ಸಹಕಾರದಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆದು ಪ್ರಶಸ್ತಿ ಗಳಿಸಿದ್ದೇನೆ. ಬಿರುವೆರ್ ಕುಡ್ಲ, ರಾಜ್ಯ ಫೆಡರೇಷನ್, ಜಿಲ್ಲಾ ಫೆಡರೇಷನ್ ಸಹಿತ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸ ಬಯಸುತ್ತೇನೆ. ರಾಜ್ಯವನ್ನು ಪ್ರತಿನಿಧಿಸಿ ಈ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸವಾಗಿದೆ ಎಂದು ಧನರಾಜ್ ಹೇಳಿದರು.