ವಿಟ್ಲ, ಫೆ 11(SM): ಜಲ್ಲಿ ಹುಡಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಮದುವೆ ಸಮಾರಂಭದ ವಧುವರರುಕರೆದುಕೊಂಡು ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಕನ್ಯಾನ ಸಮೀಪದ ಕಮ್ಮಾಜೆ ಎಂಬಲ್ಲಿ ನಡೆದಿದೆ. ಘಟನೆಯ ಬಳಿಕ ಆಕ್ರೋಶಿತ ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ಕೂಡ ನಡೆದಿದೆ.
ಕನ್ಯಾನ ಗ್ರಾಮದ ಮಾರಾಟಿಮೂಲೆ ಎಂಬಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಮದುಮಗನ ಕಡೆಯವರು ಮದುಮಗಳ ಮನೆಗೆ ಆಗಮಿಸಿ, ಮದುಮಗಳನ್ನು ಕರೆದುಕೊಂಡು ಮನೆಯಿಂದ ಪೈವಳಿಕೆ ಕಡೆಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದರು.
ಈ ಸಂದರ್ಭ ಕರ್ನಾಟಕ-ಕೇರಳ ನಡುವೆ ಜಲ್ಲಿ ಹುಡಿ ಸಾಗಾಟ ಮಾಡುತ್ತಿದ್ದ ಲಾರಿ ಕಾಸರಗೋಡುನಲ್ಲಿ ಜಲ್ಲಿ ಹುಡಿ ಖಾಲಿ ಮಾಡಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಮಗು ಸಹಿತ ಮೂವರು ಗಂಭೀರ ಗಾಯಗೊಂಡಿದ್ದು, ಇಬ್ಬರನ್ನು ಉಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಧುವರರು ಯಾವುದೇ ಗಾಯವಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ.
ಗ್ರಾಮಸ್ಥರಿಂದ ಆಕ್ರೋಶ, ರಸ್ತೆ ತಡೆ:
ಘಟನೆ ನಡೆಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ. ಜಲ್ಲಿ ಹುಡಿ ಸಾಗಾಟ ಮಾಡುವ ಹತ್ತು ಚಕ್ರದ ಲಾರಿಗಳು ಈ ರಸ್ತೆಯಲ್ಲಿ ನಿರಂತರವಾಗಿ ಸಂಚಾರ ಮಾಡುತ್ತಿವೆ. ಇಲ್ಲಿ ಹತ್ತು ಚಕ್ರದ ಲಾರಿ ಸಂಚಾರ ಮಾಡಲು ಕಾನೂನು ಪ್ರಕಾರ ನಿಷೇಧಿಸಲಾಗಿದೆ. ಆದರೂ ಸಂಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಯಮದೂತನಂತೆ ಸಂಚಾರ ಮಾಡುವ ಲಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಲಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಈ ಸಂದರ್ಭ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿಯನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು "ನೀವು ಲಾರಿ ವಶಕ್ಕೆ ಪಡೆಯಬಾರದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.
ಸಾರ್ವಜನಿಕರು ವಾಹನವನ್ನು ತೆರವುಗೊಳಿಸದಂತೆ ಪಟ್ಟು ಹಿಡಿದರು. ಬಳಿಕ ಸಾರ್ವಜನಿಕರು ಬಂಟ್ವಾಳ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಅವರು ಲಾರಿ ವಿರುದ್ಧ ಸಾರಿಗೆ ಇಲಾಖೆ ವತಿಯಿಂದ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.