ಮಂಗಳೂರು, ಫೆ 12 (MSP): ದಕ್ಷಿಣ ಕನ್ನಡ ಲಾರಿಮಾಲಿಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಲಾರಿ ಮಾಲಕರು,ಮತ್ತು ಚಾಲಕರು ಸ್ಥಳೀಯ ಪೊಲೀಸರ ಕಿರುಕುಳ ಹಾಗೂ ಭ್ರಷ್ಟ ಜಿಲ್ಲಾಡಳಿತ ಅಧಿಕಾರಿಗಳ ದೌರ್ಜನ್ಯದ ವಿರುದ್ದ ಪಣಂಬೂರು ಎಸಿಪಿ ಕಚೇರಿಗೆ ಫೆ.11 ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಜ್ಪೆ ಠಾಣಾ ಪೊಲೀಸರ ನಡವಳಿಕೆಯನ್ನು ಖಂಡಿಸಿದ ಪ್ರತಿಭಟನಕಾರರು, ಲಾರಿಗೆ ಬಲತ್ಕಾರವಾಗಿ ಮರಳು ತುಂಬಿಸಿಕೊಂಡು ಬಜ್ಪೆ ಆರಕ್ಷಕ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಪ್ರತಿಭಟನೆ ನಡೆಸಿದರು. ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ ಅನಧಿಕೃತವಾಗಿ ವಶಪಡಿಸಿಕೊಂಡ ಲಾರಿಗಳನ್ನು ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಬೇಕು. ಅಲ್ಲದೆ ಲಾರಿ ಚಾಲಕರಿಗೆ ಉಂಟಾಗುವ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಬೇಕು. ಲಾರಿ ಚಾಲಕರ ಮೇಲೆ ಎಫ್ ಐ ಆರ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬಜಪೆ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ ವಿರುದ್ಧ ದಾಖಲಾಗಿರುವ ದೂರಿನ ಅಂಶಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದ ಲಾರಿ ಮಾಲಕರು ಮತ್ತು ಚಾಲಕರು ಎಸಿಪಿಯವರಿಗೆ ಮನವಿ ಸಲ್ಲಿಸಿದರು.