ಮಂಗಳೂರು, ಫೆ 12(SM): ನಮ್ಮ ಮನೆ ಸುತ್ತ ಪ್ರತಿನಿತ್ಯ ಬಳಸಿದ ಬಿಸಾಕಿದ ವಸ್ತುಗಳ ತ್ಯಾಜ್ಯ ರಾಶಿರಾಶಿಯಾಗಿ ಸಂಗ್ರಹವಾಗುತ್ತದೆ. ಇಂತಹ ಕಸದಿಂದ ಪರಿಸರಕ್ಕೆ ಪೂರಕವಾಗುವ ವಸ್ತುಗಳನ್ನು ತಯಾರಿಸಲಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅದನ್ನು ಕಾರ್ಯಗತಗೊಳಿಸುವುದು ಮಾತ್ರ ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಮಂಗಳೂರಿನ ಬೊಕ್ಕಪಟ್ನ ನಿವಾಸಿ ವಿದ್ಯಾರ್ಥಿನಿ ಮೇಘಾ ಮೆಂಡನ್ ಕಸವನ್ನು ರಸವನ್ನಾಗಿಸಿದ್ದಾರೆ. ನಾವು ನೀವು ಬಳಸಿ ಕಸದ ತೊಟ್ಟಿಗೆಸೆಯುವ ಬಾಟಲಿಗಳನ್ನು ಬಳಸಿ ಮೇಘಾ ಅಂಲಂಕಾರಿಕ ವಸ್ತುಗಳನ್ನು ತಯಾರಿಸಿದ್ದು, ಬಾಟಲಿಗಳಿಗೆ ಜೀವಕಳೆ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇನ್ನು ಹೇಳಿ ಕೇಳಿ ಈಕೆ ಅರ್ಕಿಟೆಕ್ಚರ್ ಓದುತ್ತಿರುವ ವಿದ್ಯಾರ್ಥಿನಿ. ಕಸವನ್ನು ರಸ ವನ್ನಾಗಿ ಪರಿವರ್ತಿಸಿ ಎನ್ನುವ ಬಗ್ಗೆ ಡಂಗೂರು ಸಾರುವವರಿಗೆ ಸ್ವತಃ ಮೇಘಾ ಅವರು ಕಾರ್ಯಕ್ಕೆ ಇಳಿದು ಮಾರ್ಗದರ್ಶಿಯಾಗಿದ್ದಾರೆ.
ಜನರು ಎಲ್ಲೆಂದರಲ್ಲಿ ಬಿಸಾಕೋ ಬಾಟಲಿಗಳನ್ನು ಸಂಗ್ರಹಿಸಿ ತಂದು ಅದನ್ನು ಬಣ್ಣಗಳಿಂದ ಅಲಂಕಾರ ಮಾಡಿ ಮನೆ ಡೆಕೋರೇಷನ್ ಗೆ ಬಳಸುತ್ತಿದ್ದಾರೆ. ಇನ್ನೂ ಇವರು ಹೋದಲ್ಲೆಲ್ಲ ಸಿಕ್ಕಿದಂತಹ ಬಾಟಲ್ ಗಳನ್ನು ಸಂಗ್ರಹಿಸಿ ತಂದು ನಿರುಪಯುಕ್ತವೆಂಬ ಬಾಟಲ್ ಗಳನ್ನು ಉಪಯುಕ್ತವೆಂಬಂತೆ ಮಾಡುತ್ತಾರೆ. ಅಲಂಕಾರಿಕೆಗಳನ್ನು ತಯಾರಿಸಿ ತನ್ನ ಮನೆ ಶೃಂಗರಿಸಿರುವುದರ ಜತೆಗೆ ತನ್ನ ಸ್ನೇಹಿತರಿಗೆ ಹಂಚಿದ್ದಾರೆ. ಆ ಮೂಲಕ ನೈರ್ಮಲ್ಯದ ಪಾಠವನ್ನು ಸಮಾಜಕ್ಕೆ ಸಾರಿದ್ದಾರೆ.
ಬಾಟಲಿಗಳಿಗೆ ಬಣ್ಣ ಹಚ್ಚಿ ಅದಕ್ಕೆ ಪೂರಕವಾದ ಚಿತ್ರಗಳನ್ನು ಬಿಡಿಸಿ, ವಿದ್ಯುತ್ ಬೆಳಕು ಹಾಯಿಸಿದಾಗ ರಚಿಸಿದ ಕಲಾಕೃತಿಗೆ ಮತ್ತಷ್ಟು ಸೌಂದರ್ಯ ಬರುತ್ತದೆ. ಮನೆಯ ಡೈನಿಂಗ್ ಟೇಬಲ್, ಶೋಕೇಸ್, ಟಿವಿ ಕಪಾಟು, ಬೆಡ್ ರೂಮ್, ಹೋಟೆಲ್ ಟೇಬಲ್, ಕ್ಯಾಶ್ ಕೌಂಟರ್, ಕಚೇರಿಯ ಕಾರ್ನರ್, ಆಫೀಸ್ ಟೇಬಲ್ ಗಳಿಗೆ ಇದನ್ನು ಉಪಯೋಗಿಸಬಹುದು. ಹಗಲು ಮತ್ತು ರಾತ್ರಿ ವೇಳೆ ಇದು ಮಿನುಗುವಂತೆ ಕೂಡ ಅಲಂಕೃತ ವಸ್ತುಗಳನ್ನು ಜೋಡಿಸುವ ಕೈಚಳಕವನ್ನು ಮೇಘಾ ಹೊಂದಿದ್ದಾರೆ.
ಆಧುನಿಕ ಯುಗದಲ್ಲಿ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಜನತೆ ಬ್ಯುಸಿಯಾಗಿರುತ್ತಿರುವ ಕಾಲ ಘಟದಲ್ಲಿ ಪರಿಸರವನ್ನು ನಿರ್ಮಲವಾಗಿರಿಸಬೇಕೆಂದು ವಿದ್ಯಾರ್ಥಿಯೋರ್ವಳು ಶ್ರಮ ಪಡುತ್ತಿದ್ದು ಆಕೆಯ ಕಾರ್ಯ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಕೇವಲ ಭಾಷಣಕ್ಕೆ ಸೀಮಿತರಾಗುವ ಪರಿಸರವಾದಿಗಳಿಗೆ ಮೇಘಾ ನೈಜ ಆದರ್ಶರಾಗಿದ್ದಾರೆ.