ಕಾರ್ಕಳ, ಫೆ 12(SM): ನಿಟ್ಟೆ ಭ್ರಾಮರಿ ಪರಿಸರದಲ್ಲಿ ಆರಾಧಿಸುತ್ತಿದ್ದ ನಾಗನ ಕಲ್ಲು ಬಾವಿಗೆ ಎಸೆದಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರು ಪೆಟ್ರೋಲ್ ಬಂಕ್ ಸಮೀಪದ ನಿವಾಸಿ ತುಕರಾಮ ಶೆಟ್ಟಿಗಾರ(50) ಎಂಬಾತನನ್ನು ಗ್ರಾಮಾಂತರ ಎಸೈ ನಾಸೀರ್ ಹುಸೈನ್ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತುಕರಾಮ ಶೆಟ್ಟಿಗಾರ ಈ ಕುರಿತು ತನ್ನ ಮನಸ್ಥಿತಿಯನ್ನು ಪೊಲೀಸರಲ್ಲಿ ತೆರೆದಿಟ್ಟಿದ್ದಾನೆ.
ಬಾವಿಗೆ ಎಸೆದದ್ದು ಎಂದು ತಪ್ಪೊಪ್ಪಿಕೊಂಡ ತುಕಾರಾಂ:
1965ರಲ್ಲಿ ತುಕರಾಮನ ತಂದೆ ಇದೇ ಪರಿಸರದಲ್ಲಿ ವಾಸವಾಗಿದ್ದರು. ಅವರಿಗೆ ಸೇರಿದ ಜಾಗದಲ್ಲಿ ನಾಗನ ಕಲ್ಲು ಹಾಗೂ ದೈವದ ಗುಡಿಯಿತ್ತು. ಕೆಲವರು ಸೇರಿಕೊಂಡು ತಂದೆಗೆ ಮೋಸ ಮಾಡಿದ್ದರು. ಬಳಿಕ ನಾವೆಲ್ಲರೂ ಕೊಲ್ಲೂರಿಗೆ ತೆರಳಿ ಅಲ್ಲಿ ಮನೆಯಲ್ಲಿ ವಾಸಮಾಡಿಕೊಂಡಿದ್ದೆವು. ನಮ್ಮ ಜಾಗ ನಮಗೆ ಸಿಗದೇ ಇದ್ದರೆ ಇಲ್ಲಿರುವ ನಾಗ, ದೈವಗಳಿಗೆ ನೆಲೆ ಅಗತ್ಯವಿದೆಯೇ ಎಂಬ ಪ್ರಶ್ನೆಯು ಮನದಲ್ಲಿ ಕಾಡಗೊಡಗಿತ್ತು. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಗ್ಗಿಂದಾಗೆ ನಾನು ಅದೇ ಪರಿಸರಕ್ಕೆ ಬಂದು ಹೋಗುತ್ತಿದೆ. ನಾನೇ ಖುದ್ದಾಗಿ ನಾಗನ ಕಲ್ಲನ್ನು ಬಾವಿಗೆ ಎಸೆದಿದ್ದೇನೆ. ದೈವದ ಗುಡಿಗೆ ಅಪವಿತ್ರ ಗೊಳಿಸಿದ್ದೇನೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ದುರುದ್ದೇಶ ನನಗಿಲ್ಲ ಎಂಬ ಹೇಳಿಕೆಯನ್ನು ತುಕರಾಂ ಶೆಟ್ಟಿಗಾರ ಪೊಲೀಸರಿಗೆ ನೀಡಿದ್ದಾನೆ.
ಪತ್ನಿ ಹಾಗೂ ಮಕ್ಕಳಿಂದ ದೂರ ಉಳಿದಿದ್ದ ತುಕರಾಮ ಕೊಲ್ಲೂರು ಪರಿಸರದಲ್ಲಿಯೇ ತಿರುಗುತ್ತಿದ್ದಾನೆಂಬ ಮಾಹಿತಿಯೂ ಪೊಲೀಸರು ಕಲೆ ಹಾಕಿದ್ದಾರೆ. ಈ ವಿವಾದವು ಭಾರೀ ಅನುಮಾನಗಳಿಗೆ ಎಡೆ ಮಾಡಿದ್ದು, ಹಿಂದು ಪರ ಸಂಘಟನೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ರವಾಯಿಸಿ ಪ್ರಕರಣದ ಹಿಂದೆ ಮಾತಾಂತರ ಸಂಚು ಇದೆ ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಆರೋಪಿ ತುಕರಾಮ ಶೆಟ್ಟಿಗಾರ್ ಮಾನಸಿಕವಾಗಿ ನೊಂದುಕೊಂಡ ಸ್ಥಿತಿಯಲ್ಲಿ ಇದ್ದುದರಿಂದ ಆತನಿಂದ ಮುಚ್ಚಳಿಕೆ ಬರೆಸಿದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.